ಮುಂಬೈ: ಬಾಲ್ಯದ ಜೀವನ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಆ ತುಂಟಾಟ, ಚೆಲ್ಲಾಟವನ್ನು ನೆನಪಿಸಿಕೊಂಡರೆ ಈಗಲೂ ಒಮ್ಮೆ ನಮ್ಮ ತುಟಿಯಂಚಲ್ಲಿ ನಗು ಚೆಲ್ಲುತ್ತದೆ. ನಟಿ ಹಾಗೂ ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಸಹ ತಮ್ಮ ಬಾಲ್ಯದ ಕ್ಷಣಗಳನ್ನು ನೆನಪಿಸಿಕೊಂಡಿದ್ದು, ತಮ್ಮ ಸಹೋದರನೊಂದಿಗೆ ಇರುವ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದು, ವೈರಲ್ ಆಗಿದೆ.
ಅಣ್ಣ ಕರ್ನೇಶ್ ಶರ್ಮಾ ಅವರು ಅನುಷ್ಕಾ ಶರ್ಮಾರನ್ನು ತಬ್ಬಿ ಹಿಡಿದಿದ್ದು, ಅಣ್ಣನ ತೊಡೆಯ ಮೇಲೆ ಕುಳಿತಿರುವ ಅನುಷ್ಕಾ ನಗೆ ಬೀರುತ್ತಿರುವ ಫೋಟೋವನ್ನು ಹೃದಯದ ಎಮೋಜಿಯೊಂದಿಗೆ ಅನುಷ್ಕಾ ಶೇರ್ ಮಾಡಿದ್ದಾರೆ. ಸಹೋದರರ ದಿನ ಹಿನ್ನೆಲೆಯಲ್ಲಿ ಅನುಷ್ಕಾ ಅವರು ತಮ್ಮ ಅಣ್ಣನೊಂದಿಗೆ ಇರುವ ಫೋಟೋವನ್ನು ಶೇರ್ ಮಾಡಿಕೊಂಡು ಶುಭ ಕೋರಿದ್ದಾರೆ.
ಈಗಾಗಲೇ ಫೋಟೋ ವೈರಲ್ ಆಗಿದ್ದು, 1.30 ಲಕ್ಷಕ್ಕೂ ಹೆಚ್ಚು ಲೈಕ್ಸ್ಗಳು ಬಂದಿವೆ. ಅಭಿಮಾನಿಗಳಿಂದ ಸಾಕಷ್ಟು ಶುಭಾಶಯಗಳು ಸಹ ಹರಿದುಬಂದಿವೆ. ಅನುಷ್ಕಾ ಅವರ ಬಾಲ್ಯದ ಫೋಟೋ ನೋಡಿದ ಅಭಿಮಾನಿಗಳು ಇದು ನೀವೇನಾ? ನಂಬಲು ಆಗುತ್ತಿಲ್ಲ ಎಂದು ಅಚ್ಚರಿಯನ್ನು ಹೊರಹಾಕಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಇತ್ತೀಚೆಗಷ್ಟೇ ಅನುಷ್ಕಾ ಮತ್ತು ಕರ್ನೇಶ್ ಅವರು ಮೊದಲ ಬಾರಿಗೆ ತಮ್ಮದೇ ನಿರ್ಮಾಣದ ವೆಬ್ ಶೋ ಪಟಾಲಾ ಲೊಕ್ನಲ್ಲಿ ಒಟ್ಟಿಗೆ ನಟಿಸಿದ್ದು, ಶೋಗೆ ಒಳ್ಳೆಯ ಸ್ಪಂದನೆ ಕೂಡ ಸಿಕ್ಕಿದೆ. ಅಂದಹಾಗೆ ಅನುಷ್ಕಾ ಶರ್ಮಾ ಅವರಿಗೆ ಬೆಂಗಳೂರಿನೊಂದಿಗೆ ಅವಿನಾಭಾವ ಸಂಬಂಧವಿದ್ದು, ಶೈಕ್ಷಣಿಕ ಜೀವನವನ್ನು ಇಲ್ಲಿಯೇ ಕಳೆದಿದ್ದಾರೆ. (ಏಜೆನ್ಸೀಸ್)