ಮುಂಬೈ: ಬಾಲಿವುಡ್ ನಿರ್ದೇಶಕ ಅನುರಾಗ್ ವಿರುದ್ಧ ಸೂಕ್ತ ಆ್ಯಕ್ಷನ್ ತೆಗೆದುಕೊಳ್ಳಿದಿದ್ದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಅವರ ಮೇಲೆ ಅತ್ಯಾಚಾರದ ಆರೋಪ ಹೊರಿಸಿರುವ ನಟಿ ಪಾಯಲ್ ಘೋಶ್ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ನಿರ್ದೇಶಕ ಅನುರಾಗ್ ಕಶ್ಯಪ್ ಪೊಲೀಸರ ಎದುರು ಗುರುವಾರ ಹಾಜರಾಗಿದ್ದಾರೆ.
2013ರಲ್ಲಿ ಅನುರಾಗ್ ಕಶ್ಯಪ್ ತನನ್ನು ವರ್ಸೋವಾದ ತಮ್ಮ ಆಫೀಸಿಗೆ ಕರೆಸಿಕೊಂಡು ಬಹಳ ಕೆಟ್ಟದಾಗಿ ನಡೆಸಿಕೊಂಡಿದ್ದರು ಎಂದು ಪಾಯಲ್ ಇತ್ತೀಚೆಗಷ್ಟೇ ವರ್ಸೋವಾ ಪೊಲೀಸ್ ಸ್ಟೇಶನ್ನಲ್ಲಿ ದೂರು ದಾಖಲಿಸಿದ್ದರು. ಅಷ್ಟೇ ಅಲ್ಲದೆ, ಡ್ರಗ್ಸ್ ಆಕ್ಟ್ನಡಿ ಅನುರಾಗ್ ಕಶ್ಯಪ್ ವಿರುದ್ಧ ಪಾಯಲ್ ಇನ್ನೊಂದು ಕೇಸನ್ನು ದಾಖಲಿಸಿದ್ದರು. ಆದರೆ, ವರ್ಸೋವಾ ಪೊಲೀಸರು ಇನ್ನೂ ಅನುರಾಗ್ ಅವರನ್ನು ಕರೆದು ವಿಚಾರಣೆ ಮಾಡಿಲ್ಲ. ಈ ಸಂಬಂಧ ಅನುರಾಗ್, ಪೊಲೀಸರೆದುರು ಹಾಜರಾಗಿ ಸುಮಾರು ಎಂಟು ತಾಸುಗಳ ಕಾಲ ವಿಚಾರಣೆಯಲ್ಲಿ ಅವರು ಭಾಗಿಯಾಗಿದ್ದಾರೆ.
ಪ್ರಮುಖವಾಗಿ, ಪಾಯಲ್ ತಮ್ಮ ವಿರುದ್ಧ ಲೈಂಗಿಕ ಕಿರುಕುಳ ಆರೋಪಿಸಿದ ಸಮಯದಲ್ಲಿ ತಾವು ಭಾರತದಲ್ಲೇ ಇರಲಿಲ್ಲ, ಶ್ರೀಲಂಕಾದಲ್ಲಿ ಶೂಟಿಂಗ್ ಮಾಡುತ್ತಿದ್ದೆ ಎಂದು ಅನುರಾಗ್ ಹೇಳಿದ್ದಾರಂತೆ. ಅಷ್ಟೇ ಅಲ್ಲ, ಅದಕ್ಕೆ ಪೂರಕವಾದ ಸಾಕ್ಷ್ಯಗಳನ್ನೂ ಒದಗಿಸಿದ್ದಾರಂತೆ.
2013ರಲ್ಲಿ ನಡೆದಿದೆ ಎನ್ನಲಾದ ಘಟನೆ ಬಗ್ಗೆ ಪಾಯಲ್ ಈಗ್ಯಾಕೆ ಸುದ್ದಿ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿರುವ ಅನುರಾಗ ಪರ ವಕೀಲರಾದ ಪ್ರಿಯಾಂಕಾ ಕಿಮಾನಿ, 'ಪಾಯಲ್ ಅವರು 2013ರ ಆಗಸ್ಟ್ನಲ್ಲಿ ಅನುರಾಗ್ ತಮ್ಮ ಜತೆಗೆ ಅನುಚಿತವಾಗಿ ವರ್ತಿಸಿದರು ಎಂದು ಹೇಳಿಕೊಂಡಿದ್ದರು. ಆದರೆ, ಅನುರಾಗ್, ಆ ಇಡೀ ತಿಂಗಳು ಶ್ರೀಲಂಕಾದಲ್ಲಿ ಶೂಟಿಂಗ್ನಲ್ಲಿ ಭಾಗವಹಿಸಿದ್ದರು. ಇಷ್ಟಕ್ಕೂ ಏಳು ವರ್ಷಗಳ ಹಿಂದೆ ನಡೆದಿದೆ ಎನ್ನಲಾದ ಘಟನೆಯ ಬಗ್ಗೆ ಪಾಯಲ್ ಈಗ್ಯಾಕೆ ಮಾತನಾಡುತ್ತಿದ್ದಾರೆ? ಅನುರಾಗ್ ಅವರ ಹೆಸರು ಮತ್ತು ಜನಪ್ರಿಯತೆಗೆ ಮಸಿ ಬಳಿಯುವುದಕ್ಕೆ ಇದು ಅವರು ಮಾಡುತ್ತಿರುವ ಹುನ್ನಾರ' ಎಂದು ಹೇಳಿದ್ದಾರೆ.