ಮುಂಬೈ: ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತೀಯ ಜನತಾ ಪಕ್ಷವನ್ನು ಕಾಲದಿಂದ ಕಾಲಕ್ಕೆ ಹೊಗಳುತ್ತಲೇ ಬಂದಿರುವ ಮತ್ತು ಈ ಮೂಲಕ ಅವರ ಕಟ್ಟಾ ಬೆಂಬಲಿಗ ಎಂದು ಗುರುತಿಸಿಕೊಂಡಿರುವ ಬಾಲಿವುಡ್ನ ಹಿರಿಯ ನಟ ಅನುಪಮ್ ಖೇರ್, ಈಗ ಮೊದಲ ಬಾರಿ ಸರ್ಕಾರದ ವಿರುದ್ಧ ಮಾತನಾಡಿದ್ದಾರೆ. ಸರ್ಕಾರ ಇನ್ನಾದರೂ ತನ್ನ ತಪ್ಪು ಒಪ್ಪಿಕೊಳ್ಳಬೇಕು ಎಂದು ಹೇಳಿದ್ದಾರೆ.
ಕರೊನಾ ಎರಡನೆಯ ಅಲೆಯಿಂದ ದೇಶದಲ್ಲಿ ಆಹಾಕಾರ ಎದ್ದಿದ್ದು ಜನ ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಸ್ವಲ್ಪ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕಿತ್ತು ಎಂದು ಸಂದರ್ಶನವೊಂದರಲ್ಲಿ ಎಚ್ಚರಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಎಲ್ಲೋ ಒಂದು ಕಡೆ ಸರ್ಕಾರ ಜನರನ್ನು ಕಾಪಾಡಲು ಮತ್ತು ಸಂಕಷ್ಟದಿಂದ ಪಾರು ಮಾಡುವುದರಲ್ಲಿ ಎಡವಿದೆ. ಇದನ್ನು ಸರ್ಕಾರ ಒಪ್ಪಿಕೊಳ್ಳಬೇಕು. ಬರೀ ಇಮೇಜ್ ವೃದ್ಧಿಸಿಕೊಳ್ಳುವುದಷ್ಟೇ ಅಲ್ಲ, ತಾವೆಲ್ಲಿ ಎಡವುತ್ತಿದ್ದೇವೆ ಮತ್ತು ಹೇಗೆ ಇದರಿಂದ ಬರಬೇಕು ಎಂದು ಸರ್ಕಾರ ಯೋಚಿಸುವುದರ ಜತೆಗೆ, ಈ ನಿಟ್ಟಿನಲ್ಲಿ ಹೆಜ್ಜೆ ಇಡಬೇಕು ಎಂದು ಅನುಪಮ್ ಖೇರ್ ಹೇಳಿದ್ದಾರೆ.
ಈ ಸರ್ಕಾರದ ಬಗ್ಗೆ ಜನರಲ್ಲಿ ಸಾಕಷ್ಟು ನಂಬಿಕೆ ಇತ್ತು. ಆದರೆ, ಈ ಸರ್ಕಾರವನ್ನು ಆಯ್ಕೆ ಮಾಡಿದ ಹಲವರು ಟೀಕೆ ಮಾಡುತ್ತಿದ್ದಾರೆ ಮತ್ತು ಆ ಟೀಕೆ ನ್ಯಾಯಯುತವಾಗಿಯೇ ಇದೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು, ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ. ಏಕೆಂದರೆ, ಅವರು ಜನರಿಂದ ದೊಡ್ಡ ಮಟ್ಟ ಬಹುಮತದಲ್ಲಿ ಆರಿಸಲ್ಪಟ್ಟಿದ್ದಾರೆ. ಹಾಗೆಯೇ, ಅವರನ್ನು ಆಯ್ಕೆ ಮಾಡಿದ ನಮ್ಮಂತಹ ಸಾಮಾನ್ಯ ಜನರು, ಇದನ್ನೆಲ್ಲ ನೋಡಿ ಕೋಪಗೊಂಡರೆ ಅದರಲ್ಲಿ ತಪ್ಪಿಲ್ಲ. ಇವೆಲ್ಲಕ್ಕೂ ಸರ್ಕಾರವನ್ನೇ ಜವಾಬ್ದಾರಿಯುತ ಸ್ಥಾನದಲ್ಲಿ ನಿಲ್ಲಿಸಿದರೆ ತಪ್ಪಿಲ್ಲ ಎಂದು ಅನುಪಮ್ ಖೇರ್ ಹೇಳಿಕೊಂಡಿದ್ದಾರೆ.