ಸಿನಿವಾಣಿ

ಎಲ್ಲಾ ಸರಿ, ಈ ಪನ್ನಾ ಯಾರು? ಉತ್ತರಕ್ಕಾಗಿ ನಾಳೆವರೆಗೂ ಕಾಯಬೇಕು ...

manjunathktgns

ಎರಡು ವಾರಗಳ ಹಿಂದೆ ಸುದೀಪ್​ ಅವರ ವಿಕ್ರಾಂತ್​ ರೋಣ ಚಿತ್ರದ ಫಸ್ಟ್​ ಲುಕ್​ ಬಿಡುಗಡೆಯಾಯಿತು. ಕಳೆದ ವಾರ ನಿರೂಪ್​ ಭಂಡಾರಿ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಫಸ್ಟ್​ ಲುಕ್​ ಬಿಡುಗಡೆಯಾಯಿತು. ಈ ವಾರವೂ 'ಫ್ಯಾಂಟಮ್​' ಚಿತ್ರತಂಡದಿಂದ ಏನಾದರೂ ಸರ್​ಪ್ರೈಸ್​ ಇರಬಹುದಾ ಎಂಬ ಪ್ರಶ್ನೆ ಸಹಜವಾಗಿಯೇ ಅವರ ಅಭಿಮಾನಿಗಳಲ್ಲಿ ಇತ್ತು.

ಅದಕ್ಕೆ ಸರಿಯಾಗಿ ಇಂದು ಸುದೀಪ್​ ಅವರು ಟ್ವೀಟ್​ ಮಾಡಿದ್ದಾರೆ. ನಾಳೆ ಬೆಳಿಗ್ಗೆ, ಪನ್ನಾ ಪಾತ್ರ ಪರಿಚಯ ಮಾಡಿಕೊಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

''ಫ್ಯಾಂಟಮ್​' ಚಿತ್ರದ ಪನ್ನಾ ಪಾತ್ರದ ಫಸ್ಟ್​ ಲುಕ್​ ನಾಳೆ ಬಿಡುಗಡೆ ಮಾಡಲಾಗುತ್ತಿದೆ. ಆ ಪಾತ್ರದ ಬಗ್ಗೆ ನಮ್ಮ ಸೃಷ್ಟಿಕರ್ತರೇ ಎಲ್ಲಾ ವಿಷಯಗಳನ್ನು ಹೇಳಲಿದ್ದಾರೆ. ಗುರುವಾರ ಬೆಳಿಗ್ಗೆ 10ಕ್ಕೆ ಹೊಸ ಪೋಸ್ಟರ್​ ಬಿಡುಗಡೆಯಾಗಲಿದೆ' ಎಂದು ಹೇಳಿದ್ದಾರೆ.

ಇಷ್ಟಕ್ಕೂ ಈ ಪನ್ನಾ ಯಾರು? ಈ ಬಗ್ಗೆ ಸುದೀಪ್​ ಹೇಳಿಲಲ್ಲ. ನಿರ್ದೇಶಕ ಅನೂಪ್​ ಭಂಡಾರಿ ಅವರೇ ಈ ವಿಷಯವನ್ನು ಬಹಿರಂಗಪಡಿಸಲಿದ್ದಾರೆ ಎಂಬ ವಿಷಯವನ್ನು ಅವರು ಹೇಳಿದ್ದಾರೆ. ಹಾಗಾಗಿ ಈ ಪನ್ನಾ ಯಾರು ಎಂಬ ಉತ್ತರಕ್ಕೆ, ಗುರುವಾರ ಬೆಳಿಗ್ಗೆ 10 ಗಂಟೆಯವರೆಗೂ ಕಾಯಬೇಕು.

'ಫ್ಯಾಂಟಮ್​' ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್​ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಇದೆ. ಇನ್ನು ಚಿತ್ರದ ಮೊದಲ ಸ್ನೀಕ್​ಪೀಕ್​ನಲ್ಲಿ ದೋಣಿಯಲ್ಲಿ ಸುದೀಪ್​ ಜತೆಗೆ ಒಂದು ಹುಡುಗಿ ಇದ್ದಾಳೆ. ಈ ಹುಡುಗಿ ಮತ್ತು ಶ್ರದ್ಧಾ ಇಬ್ಬರಲ್ಲಿ ಪನ್ನಾ ಯಾರು? ಅಥವಾ ಇವರಿಬ್ಬರನ್ನೂ ಬಿಟ್ಟು ಪನ್ನಾ ಎಂಬ ಇನ್ನೊಂದು ಪಾತ್ರ ಯಾವುದಾದರೂ ಇದೆಯಾ? ಎಂಬ ಉತ್ತರಕ್ಕೆ ಗುರುವಾರದವರೆಗೂ ಕಾಯಬೇಕು.

ಜಾಕ್​ ಮಂಜು ನಿರ್ಮಾಣ ಮಾಡುತ್ತಿರುವ 'ಫ್ಯಾಂಟಮ್​' ಚಿತ್ರಕ್ಕೆ ಅಜನೀಶ್​ ಲೋಕನಾಥ್​ ಸಂಗೀತ ಸಂಯೋಜಿಸುತ್ತಿದ್ದಾರೆ.