ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಗೆಳತಿ ಪವಿತ್ರಾ ಗೌಡ ಹಾಗೂ ಸಹಚರರು ಅರೆಸ್ಟ್ ಆಗಿರುವುದು ಇಡೀ ರಾಜ್ಯಕ್ಕೆ ಗೊತ್ತಿದೆ. ಡಿ-ಗ್ಯಾಂಗ್ನ ಕೃತ್ಯ ತಿಳಿದು ಎಲ್ಲರು ಶಾಕ್ ಆಗಿದ್ದಾರೆ. ಸ್ಟಾರ್ ನಟನೊಬ್ಬ ಇಂತಹ ಹೇಯ ಕೃತ್ಯ ಎಸಗಿದ್ದಾನೆ ಎಂಬುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸದ್ಯ ಈ ಪ್ರಕರಣ ರಾಜ್ಯದೆಲ್ಲೆಡೆ ಭಾರಿ ಚರ್ಚೆಯಾಗುತ್ತಿದೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದಕ್ಕೆ ರೇಣುಕಾಸ್ವಾಮಿಯ ಕೊಲೆ ನಡೆದಿದೆ ಎನ್ನಲಾಗಿದೆ. ಇದರಲ್ಲಿ ದರ್ಶನ್ ಕೈವಾಡವಿರುವ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ.
ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ದರ್ಶನ್ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ದರ್ಶನ್ ಜತೆಗೆ ಪತ್ನಿ ವಿಜಯಲಕ್ಷ್ಮೀಗೂ ಈ ಕಂಟಕ ಕಾಡಲಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಎ2 ಆರೋಪಿಯಾಗಿದ್ದರೆ, ಗೆಳತಿ ಪವಿತ್ರಾ ಗೌಡ ಎ1 ಆರೋಪಿಯಾಗಿದ್ದಾರೆ. ಆದರೆ, ಈ ಪ್ರಕರಣದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ಎ1 ಆರೋಪಿಯಾಗಿದ್ದು, ದರ್ಶನ್ ಎ3 ಆರೋಪಿಯಾಗಿದ್ದಾರೆ.
ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನವಾದ ಬಳಿಕ ದರ್ಶನ್ಗೆ ಸಂಬಂಧಿಸಿದ ಸಾಕಷ್ಟು ಪ್ರರಕಣಗಳು ಹೊರಬರುತ್ತಿದ್ದು, ಇದೀಗ ವಿಜಯಲಕ್ಷ್ಮೀ ಕೂಡ ತೊಂದರೆ ಸಿಲುಕಿಕೊಂಡಿದ್ದಾರೆ. ಅಷ್ಟಕ್ಕೂ ವಿಜಯಲಕ್ಷ್ಮೀ ವಿರುದ್ಧ ದಾಖಲಾಗಿರುವ ಪ್ರರಕಣವೇನೆಂದರೆ, ದರ್ಶನ್ ಅವರು ಮೈಸೂರಿನ ಬಳಿಯಿರುವ ತಮ್ಮ ತೋಟದ ಮನೆಯಲ್ಲಿ ಕಾನೂನು ಬಾಹಿರವಾಗಿ ವಿಶಿಷ್ಟ ಜಾತಿಯ ಬಾರ್ ಹೆಡೆಡ್ ಗೂಸ್ ಬಾತುಕೋಳಿಯನ್ನು ಸಾಕಿದ್ದರು. ಈ ಪಕ್ಷಿಯನ್ನು ವಶಕ್ಕೆ ಪಡೆದಿದ್ದ ಅರಣ್ಯ ಇಲಾಖೆ ಎಫ್ಐಆರ್ ದಾಖಲಿಸಿ, ದರ್ಶನ್ ಸೇರಿದಂತೆ ಸಂಬಂಧಪಟ್ಟವರಿಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಲಾಗಿತ್ತು.
ಹಲವು ಬಾರಿ ನೋಟಿಸ್ ನೀಡಿದರೂ ವಿಚಾರಣೆಗೆ ದರ್ಶನ್ ಹಾಜರಾಗದಿದ್ದಕ್ಕೆ ಇದೀಗ ದರ್ಶನ್ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಲು ಅರಣ್ಯ ಇಲಾಖೆ ನಿರ್ಧಾರ ಮಾಡಿದೆ ಎಂದು ತಿಳಿದುಬಂದಿದೆ. ಹೀಗಾಗಿ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮೀಗೆ ಸಂಕಷ್ಟ ಎದುರಾಗಿದೆ. ಇನ್ನು ಈ ಪ್ರಕರಣದಲ್ಲಿ ವಿಜಯಲಕ್ಷ್ಮೀ ಯಾಕೆ ಸಿಲುಕಿಕೊಂಡರು ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಮುಂದಿದೆ. ಮೈಸೂರಿನ ತಿ. ನರಸೀಪುರದ ಬಳಿಯಿರುವ ಫಾರ್ಮ್ ಹೌಸ್ ಪತ್ನಿ ವಿಜಯಲಕ್ಷ್ಮೀ ಹೆಸರಿನಲ್ಲಿದೆ. ಈ ಕಾರಣಕ್ಕೆ ಅವರನ್ನು ಈ ಪ್ರಕರಣದಲ್ಲಿ ಮೊದಲ ಆರೋಪಿಯನ್ನಾಗಿ ಮಾಡಲಾಗಿದೆ.
ಫಾರ್ಮ್ ಆಸ್ತಿಯ ಮ್ಯಾನೇಜರ್ ಆಗಿರುವ ನಾಗರಾಜ್ ಅವರನ್ನು ಎ2 ಆರೋಪಿ ಹಾಗೂ ದರ್ಶನ್ ಅವರನ್ನು ಎ3 ಆರೋಪಿಯನ್ನಾಗಿ ಮಾಡಲಾಗಿದೆ. ಸದ್ಯ ಚಾರ್ಚ್ಶೀಟ್ ಸಲ್ಲಿಕೆ ಸುದ್ದಿ ಹರಿದಾಡುತ್ತಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಅರಣ್ಯ ಇಲಾಖೆ ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಚಾರ್ಜ್ಶೀಟ್ ಸಲ್ಲಿಸಲು ಮುಂದಾಗಿದೆ ಎನ್ನಲಾಗಿದೆ. ಇದರಿಂದ ದರ್ಶನ್ ಮತ್ತೊಂದು ಸಂಕಷ್ಟಕ್ಕೆ ಸಿಲುಕೊಂಡಂತಾಗಿದೆ.