ಬೆಂಗಳೂರು: ಕಳೆದ ವರ್ಷ ಸೈಲೆಂಟ್ ಹಿಟ್ ಚಿತ್ರಗಳ ಪೈಕಿ ಅಂಜನ್ ನಾಗೇಂದ್ರ ಅಭಿನಯದ 'ಕಂಬ್ಳಿಹುಳ' ಚಿತ್ರವೂ ಒಂದು. ಈ ಚಿತ್ರವು ಬಿಡುಗಡೆಯಾದ ಮೇಲೆ ಜನರ ಗಮನಸೆಳೆದಿದ್ದಷ್ಟೇ ಅಲ್ಲ, ತಕ್ಕಮಟ್ಟಿಗೆ ಯಶಸ್ವಿಯೂ ಆಯಿತು. ಈ ಚಿತ್ರದ ನಂತರ ಕಿರುತೆರೆ ನಿರ್ದೇಶಕ ಹಯವದನ ನಿರ್ದೇಶನದ ಹೊಸ ಚಿತ್ರದಲ್ಲಿ ಅಂಜನ್ ನಾಗೇಂದ್ರ ನಟಿಸುತ್ತಾರೆ ಎಂಬ ಸುದ್ದಿ ಇತ್ತು.
ಆ ಸುದ್ದಿ ಈಗ ಕಾರ್ಯರೂಪಕ್ಕೆ ಬಂದಿದೆ. ಮೊದಲ ಹಂತವಾಗಿ ಚಿತ್ರದ ಫಸ್ಟ್ ಲುಕ್ ಮತ್ತು ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಅಂದಹಾಗೆ, ಈ ಚಿತ್ರದ ಹೆಸರೇನು ಗೊತ್ತಾ? 'ಎಲ್ಲೋ ಜೋಗಪ್ಪ ನಿನ್ನರಮನೆ' ಎಂದು ಹೆಸರಿಡಲಾಗಿದೆ.
‘ಎಲ್ಲೋ ಜೋಗಪ್ಪ ನಿನ್ನರಮನೆ’ ಚಿತ್ರದ ಸ್ಕ್ರಿಪ್ಟ್ ಪೂಜೆ ಮುಗಿದು, ಈಗಾಗಲೇ ಚಿತ್ರೀಕರಣ ಸಹ ಶುರುವಾಗಿದೆ. ಅಪ್ಪ-ಮಗನ ಸೆಂಟಿಮೆಂಟ್ ಸುತ್ತ ಈ ಚಿತ್ರ ಸಾಗುತ್ತದಂತೆ. ಅಪ್ಪನ ಮಾತಿಗೆ ಮುನಿಸಿಕೊಂಡು ಮನೆ ಬಿಟ್ಟು ಹೋಗುವ ಹುಡುಗನ ಕಥೆ ಚಿತ್ರದಲ್ಲಿದೆಯಂತೆ. ಅದರ ಜತೆಗೆ ಪ್ರೀತಿ, ಕಾಮಿಡಿ ಸಹ ಚಿತ್ರದಲ್ಲಿದೆ.
ಈ ಚಿತ್ರದಲ್ಲಿ ಅಂಜನ್ ಜತೆಗೆ ಶರತ್ ಲೋಹಿತಾಶ್ವ, ಸ್ವಾತಿ, ದಾನಪ್ಪ, ಲಕ್ಷ್ಮೀ ನಾಡಗೌಡ, ದಿನೇಶ್ ಮಂಗಳೂರು, ಬಿರಾದರ್ ಸೇರಿದಂತೆ ಹಲವು ಕಲಾವಿದರು ಇದ್ದಾರೆ. ಪೆಂಡೋರಾಸ್ ಬಾಕ್ಸ್ ಪ್ರೊಡಕ್ಷನ್ ಹಾಗೂ ಕೃಷ್ಣಛಾಯ ಚಿತ್ರ ಬ್ಯಾನರ್ನಡಿ ಪವನ್ ಸಿಮಿಕೇರಿ ಮತ್ತು ಸಿಂಧು ಹಯವದನ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
‘ಎಲ್ಲೋ ಜೋಗಪ್ಪ ನಿನ್ನರಮನೆ’ ಚಿತ್ರಕ್ಕೆ ಶಿವಪ್ರಸಾದ್ ಅವರ ಸಂಗೀತ ಮತ್ತು ನಟರಾಜ್ ಮದ್ದಾಲ ಅವರ ಛಾಯಾಗ್ರಹಣವಿದೆ.