ಬೆಂಗಳೂರು: ಕನ್ನಡದ ಹೆಮ್ಮೆಯ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಜನಪ್ರಿಯ ಕಥೆಗಳಲ್ಲೊಂದಾದ ‘ಡೇರ್ಡೆವಿಲ್ ಮುಸ್ತಾಫಾ’ ಸಿನಿಮಾ ಆಗುತ್ತಿರುವುದು ಗೊತ್ತಿರುವ ಸಂಗತಿ. ಈಗ ಇದೇ ಬಳಗದಿಂದ ಅನಿಮೇಷನ್ ಹಾಡೊಂದು ಹೊರಬಂದಿದೆ. ವಿಶೇಷ ಏನೆಂದರೆ ಆ ಹಾಡಿನಲ್ಲಿರುವುದು ವರನಟ ಡಾ. ರಾಜಕುಮಾರ್. ದಸರಾ ಪ್ರಯುಕ್ತ ಚಿತ್ರದ ಅನಿಮೇಷನ್ ಪ್ರಮೋಷನಲ್ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ಈ ಹಾಡಿನ ವಿಶೇಷತೆಯನ್ನು ಚಿತ್ರದ ನಿರ್ದೇಶಕ ಶಶಾಂಕ್ ಸೋಗಾಲ್ ವಿವರಿಸಿದ್ದಾರೆ. ‘‘ನಿನ್ನಂಥೋರ್ ಯಾರೂ ಇಲ್ವಲ್ಲೋ ಲೋಕದಾ ಮ್ಯಾಲೆ ...’ ಎಂಬ ಈ ಗೀತೆ ಕನ್ನಡ ಹವ್ಯಾಸಿ ರಂಗಭೂಮಿಯ ಅತ್ಯಂತ ಪ್ರಸಿದ್ಧ ಗೀತೆ. 40 ವರ್ಷಗಳ ಹಿಂದೆ ಪ್ರಸನ್ನ ನಿರ್ದೇಶಿಸಿದ, ಡಾ.ಕೆ.ವಿ.ನಾರಾಯಣ ರಚಿಸಿದ ‘ಹುತ್ತವ ಬಡಿದರೆ’ ನಾಟಕಕ್ಕಾಗಿ ಡಾ.ಸಿ ವೀರಣ್ಣ ರಚಿಸಿದ ಈ ಹಾಡಿನ ಸಂಗೀತ ಸಂಯೋಜನೆ ಮಾಡಿದವರು ಬಿ.ವಿ.ಕಾರಂತ’ ಎಂದು ಹಾಡಿನ ಬಗ್ಗೆ ಹೇಳುವ ನಿರ್ದೇಶಕರು, ಮೊದಲ ಬಾರಿ ಅಣ್ಣಾವ್ರವನ್ನು ಅನಿಮೇಷನ್ನಲ್ಲಿ ತೋರಿಸಿದ್ದಾರೆ.
‘ಈ ಹಾಡೊಳಗೆ ಮೈಸೂರು ರಾಜ ರಣಧೀರ ಕಂಠೀರವರ ಸಾಹಸದ ಕತೆಯಿದೆ. ಸಿನಿಮಾ ಹೊರತಾಗಿ ಈ ಹಾಡನ್ನು ವೈಭವದಿಂದ ಕಟ್ಟಿಕೊಡಬೇಕು ಎಂದೆನಿಸಿದಾಗ ಹೊಳೆದದ್ದು ಡಾ ರಾಜಕುಮಾರ್ ಅನಿಮೇಷನ್. ಇದೇ ಮೊದಲ ಬಾರಿಗೆ ಅಣ್ಣಾವ್ರನ್ನು ಅನಿಮೇಷನ್ ಮೂಲಕ ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇವೆ. ವಾಸುಕಿ ವೈಭವ್ ಹಾಡಿಗೆ ಧ್ವನಿಯಾಗಿದ್ದಾರೆ’ ಎನ್ನುತ್ತಾರೆ.