ಸಿನಿವಾಣಿ

ವಾರ್ಷಿಕೋತ್ಸವದ ಮೂಡ್‌ನಲ್ಲಿ ‘ಬಿಗ್ ಬಿ’

ಅಮಿತಾಭ್ ಬಚ್ಚನ್ ಪ್ರತಿದಿನ ವಾರ್ಷಿಕೋತ್ಸವವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಪ್ರತಿ ದಿನ ಆ ಕುರಿತು ಒಂದಲ್ಲ ಒಂದು ಟ್ವೀಟ್ ಮಾಡುತ್ತಲೇ ಇದ್ದಾರೆ. ನಿನ್ನೆ ಒಂದು ಟ್ವೀಟ್, ಇವತ್ತೊಂದು ಟ್ವೀಟ್ ಮಾಡಿರುವ ಅಮಿತಾಭ್ ಸಂತೋಷ ವ್ಯಕ್ತಪಡಿಸಿದ್ದಾರೆ.

ಅಮಿತಾಭ್ ಅವರ ಬಗ್ಗೆ ಗೊತ್ತಿರುವವರು, ಅವರ ಮದುವೆ ವಾರ್ಷಿಕೋತ್ಸವ ಈಗಲ್ಲ, ಮುಂದಿನ ತಿಂಗಳು ಎಂದು ತಪ್ಪನ್ನು ತಿದ್ದಬಹುದು. ಅಮಿತಾಭ್ ಬಚ್ಚನ್ ಮತ್ತು ಜಯಾ ಬಾಧುರಿ, 1973ರ ಜೂನ್ 3ರಂದು ಮದುವೆಯಾಗಿದ್ದನ್ನು ನೆನಪಿಸಬಹುದು. ಅದೇನೋ ಸರಿ, ಅಮಿತಾಭ್ ನೆನಪಿಸಿಕೊಳ್ಳುತ್ತಿರುವುದು ಅವರ ಮದುವೆ ವಾರ್ಷಿಕೋತ್ಸವವನ್ನಲ್ಲ, ಚಿತ್ರಗಳ ವಾರ್ಷಿಕೋತ್ಸವಗಳನ್ನ.

ಹೌದು, ಅಮಿತಾಭ್ ಬಚ್ಚನ್ ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ಕೊಟ್ಟ ಎರಡು ಪ್ರಮುಖ ಚಿತ್ರಗಳು, ಮೇ 11 ಮತ್ತು 12ರಂದು ಹಲವು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದವು. ಅವೆರಡನ್ನೂ ಅಮಿತಾಭ್ ತಮ್ಮ ಟ್ವೀಟ್‌ಗಳಲ್ಲಿ ನೆನಪಿಸಿಕೊಂಡಿದ್ದಾರೆ.

ಅಮಿತಾಭ್ ಅವರ ಕೆರಿಯರ್‌ಗೆ ಮೊದಲು ದೊಡ್ಡ ಬ್ರೇಕ್ ಕೊಟ್ಟಿದ್ದು, ಪ್ರಕಾಶ್ ಮೆಹ್ರಾ ನಿರ್ದೇಶನದ ‘ಜಂಜೀರ್’. ಈ ಚಿತ್ರದಲ್ಲಿ ಅಮಿತಾಭ್ ಮತ್ತು ಜಯಾ ಬಾಧುರಿ ಮೊದಲ ಬಾರಿಗೆ ಜತೆಯಾಗಿ ನಟಿಸಿದ್ದರು ಮತ್ತು ಈ ಚಿತ್ರದಲ್ಲಿ ಅವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಈ ಚಿತ್ರ 1973ರ ಮೇ 11ಕ್ಕೆ ಬಿಡುಗಡೆಯಾಗಿತ್ತು. ನಿನ್ನೆಗೆ ಈ ಚಿತ್ರ ಬಿಡುಗಡೆಯಾಗಿ 47 ವರ್ಷದ ಆ್ಯನಿವರ್ಸರಿಯಾದ್ದರಿಂದ, ಚಿತ್ರದ ಪೋಸ್ಟರ್ ಶೇರ್ ಮಾಡಿದ್ದರು ‘ಬಿಗ್ ಬಿ’.

ಇನ್ನು ಅಮಿತಾಭ್ ಅವರ ಚಿತ್ರಬದುಕಿಗೆ ಬ್ರೇಕ್ ಕೊಟ್ಟ ಇನ್ನೊಂದು ಚಿತ್ರ ‘ಡಾನ್’. ಈ ಚಿತ್ರ ಬಿಡುಗಡೆಯಾಗಿ ಇಂದು 42 ವರ್ಷಗಳಾಗಿವೆ. 1978ರ ಮೇ 12ರಂದು ಈ ಚಿತ್ರ ಬಿಡುಗಡೆಯಾಗಿದ್ದು, 42 ವರ್ಷಗಳ ಹಿಂದಿನ ನೆನಪನ್ನು ಮೆಲುಕು ಹಾಕಿದ್ದಾರೆ ಅಮಿತಾಭ್. ಆ ಚಿತ್ರಕ್ಕೆ ಫಿಲಂಫೇರ್​ನಿಂದ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದು, ಸಮಾರಂಬದಲ್ಲಿ ಪತ್ನಿ ಜತೆ ಭಾಗವಹಿಸಿದ್ದು, ಚಿತ್ರೀಕರಣದಲ್ಲಿ ಭಾಗಿಯಾಗಿದ್ದು ... ಹೀಗೆ ಫೋಟೋಗಳ ಜತೆಗೆ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ ಅವರು.

ಅಲ್ಲಿಗೆ ಕಳೆದೆರೆಡು ದಿನಗಳಿಂದ ಎರಡು ಚಿತ್ರಗಳನ್ನು ನೆನಪಿಸಿಕೊಂಡಿರುವ ಅಮಿತಾಭ್, ನಾಳೆ (ಮೇ 13) ಯಾವ ಚಿತ್ರವನ್ನು ನೆನಪಿಸಿಕೊಳ್ಳುತ್ತಾರೋ? ಯಾವ ಚಿತ್ರ ಅದೆಷ್ಟೋ ವರ್ಷಗಳ ಹಿಂದೆ ಇದೇ ದಿನದಂದು ಬಿಡುಗಡೆಯಾಗಿತ್ತೋ? ಎಂದು ಕಾದು ನೋಡಬೇಕು.