ಸಿನಿವಾಣಿ

ಕರೊನಾ ವರದಿ ನೆಗೆಟಿವ್​; ನಿಟ್ಟುಸಿರು ಬಿಟ್ಟ ಅಮಿತಾಬ್​ ಬಚ್ಚನ್​

ಬಾಲಿವುಡ್​ ಬಿಗ್​ ಬಿ ಅಮಿತಾಬ್​ ಬಚ್ಚನ್​ ಜು. 12ರಂದು ಕರೊನಾ ಸೋಂಕಿಗೆ ತುತ್ತಾಗೆ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಖುಷಿಯ ವಿಚಾರ ಏನೆಂದರೆ ಬಿಗ್​ಬಿ ಕರೊನಾ ವರದಿ ನೆಗೆಟಿವ್ ಬಂದಿದ್ದು, ನಿಟ್ಟುಸಿರು ಬಿಟ್ಟಿದ್ದಾರೆ. ಶೀಘ್ರದಲ್ಲಿ ಡಿಸ್ಚಾರ್ಜ್​ ಸಹ ಆಗಲಿದ್ದಾರೆ.

ಈ ವಿಚಾರವನ್ನು ಪುತ್ರ ಅಭಿಷೇಕ್​ ಬಚ್ಚನ್​ ಟ್ವಿಟರ್ ಮೂಲಕ ಹಂಚಿಕೊಂಡಿದ್ದು, ‘ಇತ್ತೀಚಿನ ವರದಿ ಪ್ರಕಾರ ತಂದೆಯ ಕೋವಿಡ್​ ವರದಿ ನೆಗೆಟಿವ್​ ಬಂದಿದೆ. ಇನ್ನು ಮುಂದೆ ಅವರು ಮನೆಯಲ್ಲಿಯೇ ರೆಸ್ಟ್ ಮಾಡಲಿದ್ದಾರೆ. ಹರಸಿ ಹಾರೈಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು’ ಎಂದಿದ್ದಾರೆ.

ಇತ್ತ ಅಮಿತಾಬ್​ ಸಹ ಟ್ವಿಟರ್​ನಲ್ಲಿ ಕೋವಿಡ್​ ಪಾಸಿಟಿವ್​ ಬಂದ ಬಗ್ಗೆ ಅಭಿಮಾನಿಗಳ ಜತೆ ಈ ಖುಷಿ ಸುದ್ದಿಯನ್ನು ಶೇರ್​ ಮಾಡಿಕೊಂಡಿದ್ದಾರೆ. ‘ಕರೊನಾ ವರದಿ ನೆಗೆಟಿವ್​ ಬಂದಿದೆ. ಇನ್ನೇನು ಮನೆಗೆ ತೆರಳಿ ಸ್ವಯಂ ಕ್ವಾರಂಟೈನ್​ನಲ್ಲಿರಲಿದ್ದೇನೆ. ತಂದೆ ತಾಯಿಯ ಆಶೀರ್ವಾದ, ಮತ್ತು ಅಭಿಮಾನಿ ಸ್ನೇಹಿತರ ಪ್ರಾರ್ಥನೆಯಿಂದ ಗುಣಮುಖನಾಗಿದ್ದೇನೆ. ಅದ್ಬುತ ಚಿಕಿತ್ಸೆ ನೀಡಿದ ನಾನಾವತಿ ಆಸ್ಪತ್ರೆ ಸಿಬ್ಬಂದಿಗೂ ಧನ್ಯವಾದ’ ಎಂದಿದ್ದಾರೆ

ಅಮಿತಾಬ್​.ಅಮಿತಾಬ್​ ಜತೆಗೆ ಅಭಿಷೇಕ್​ ಬಚ್ಚನ್​ಗೂ ಕರೊನಾ ಸೋಂಕು ತಗುಲಿತ್ತು. ಕೆಲವೇ ದಿನಗಳಲ್ಲಿ ಐಶ್ವರ್ಯಾ ರೈ ಮತ್ತು ಪುತ್ರಿ ಆರಾಧ್ಯಾಗೂ ಕರೊನಾ ಪಾಸಿಟಿವ್​ ದೃಢಪಟ್ಟಿತ್ತು. ಸದ್ಯ ಅಭಿಷೇಕ್​ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಅವರೂ ಶೀಘ್ರದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಲಿದ್ದಾರೆ. (ಏಜೆನ್ಸೀಸ್​)