ಸಿನಿವಾಣಿ

ಎಕ್ಸ್ಟ್ರಾ ಹಣವನ್ನು ಯಾಕೆ ದಾನ ಮಾಡಬಾರ್ದು?: 'ಬಿಗ್​ ಬಿ'ಗೆ ಮಹಿಳೆ ಪ್ರಶ್ನೆ

ಅದ್ಯಾಕೋ ಅಮಿತಾಭ್​ ಬಚ್ಚನ್​ಗೆ ಒಂದರ ನಂತರ ಇನ್ನೊಂದು ಇರುಸು-ಮುರುಸುಗಳು ಎದುರಾಗುತ್ತಲೇ ಇವೆ. ನಾನಾವತಿ ಆಸ್ಪತ್ರೆಯ ವೈದ್ಯರ ಬಗ್ಗೆ ಮಾತನಾಡಿದ್ದಕ್ಕೆ, ಅಮಿತಾಭ್​ ಬಚ್ಚನ್​ ಅವರ ಮೇಲಿರುವ ಗೌರವ ಕಡಿಮೆಯಾಗಿದೆ ಎಂದು ಮಹಿಳೆಯೊಬ್ಬರು ಹೇಳಿಕೊಂಡಿದ್ದರು. ಈಗ ಅಮಿತಾಭ್​ಗೆ ಇನ್ನೊಬ್ಬರು ಟ್ವೀಟ್​ ಮಾಡಿ ಕಾಲೆಳೆದಿದ್ದಾರೆ.

ಕಳೆದ ಕೆಲವು ದಿನಗಳಲ್ಲಿ ಅಮಿತಾಭ್​ ಅವರು, ಜನ ತೋರಿಸುತ್ತಿರುವ ಪ್ರೀತಿಯ ಬಗ್ಗೆ ಮಾತನಾಡಿದ್ದರು. ಜನರ ಪ್ರೀತಿ ಮತ್ತು ಆಶೀರ್ವಾದವೇ ತಮಗೆ ಶ್ರೀರಕ್ಷೆ ಎಂದು ಹೇಳಿಕೊಂಡಿದ್ದರು. ಈ ಕುರಿತು ಟ್ವೀಟ್​ ಮಾಡಿರುವ ಮಹಿಳೆ, 'ನಿಮ್ಮ ಜೇಬು ಪ್ರೀತಿ ಮತ್ತು ಆಶೀರ್ವಾದಗಳಿಂದ ತುಂಬಿದೆ ಎಂದು ನನಗೆ ಗೊತ್ತಿದೆ. ಹೀಗಿರುವಾಗ ನೀವ್ಯಾಕೆ ಜನರಿಗೆ ನಿಮ್ಮ ಬಳಿ ಇರುವ ಎಕ್ಸ್ಟ್ರಾ ಹಣವನ್ನು ದಾನ ಮಾಡಬಾರದು' ಎಂದು ಕೇಳಿದ್ದಾರೆ.

ಈ ಕುರಿತು ಬಿಗ್​ ಬಿಗೆ ಬಹಳ ಸಿಟ್ಟು ಬಂದಿರುವಂತಿದೆ. ಈ ಕುರಿತು ಬ್ಲಾಗ್​ನಲ್ಲಿ ಬರೆದುಕೊಂಡಿರುವ ಅವರು, 'ಈ ಕುರಿತು ಬರೆಯುವಾಗ ನನಗೆ ಅಳು ಬರುವಂತಿದೆ. ಏಕೆಂದರೆ, ಇದುವರೆಗೂ ನಾನು ಮಾಡಿದ ದಾನಗಳ ಬಗ್ಗೆ ಎಲ್ಲೂ ಮಾತನಾಡಬಾರದು ಎಂದು ತೀರ್ಮಾನಿಸಿದ್ದೆ. ಅದೇ ಕಾರಣಕ್ಕೆ ನಾನು ಎಲ್ಲೂ ಆ ಬಗ್ಗೆ ಹೇಳಿಕೊಂಡಿಲ್ಲ. ಆದರೆ, ಈ ಮಹಿಳೆ ನನ್ನ ನಂಬಿಕೆಯನ್ನು ಪುಡಿಪುಡಿ ಮಾಡಿದ್ದಾರೆ' ಎಂದು ಬೇಸರಿಸಿಕೊಂಡಿದ್ದಾರೆ.

ಈ ಕುರಿತು ಸೀಮಾ ಪಟೇಲ್​ ಎನ್ನುವವರಿಗೆ ಉತ್ತರ ಕೊಟ್ಟಿರುವ ಅವರು, 'ದಾನ ಮಾಡುವುದಕ್ಕೆ ನೀವು ಹೇಳಿ ಕೊಡಬೇಕಿಲ್ಲ. ಅಷ್ಟೇ ಅಲ್ಲ, ನನ್ನ ಬಗ್ಗೆ ನಿಮಗೆ ಏನೆಂದರೆ ಏನೂ ಗೊತ್ತಿಲ್ಲ. ನಾನು ಇದುವರೆಗೂ ಎಷ್ಟು ಕೊಟ್ಟಿದ್ದೇನೆ, ಕೊಡುತ್ತಿದ್ದೇನೆ ಎಂಬ ಜ್ನಾನ ಇಲ್ಲ. ಬರೀ ಬಡವರು ಮತತು ಅಗತ್ಯವಿರುವವರಿಗಷ್ಟೇ ಅಲ್ಲ, ಆತ್ಮಹತ್ಯೆಗೆ ಮುಂದಾದ ಆಂಧ್ರ, ವಿದರ್ಭ, ಬಿಹಾರ ಮತ್ತು ಉತ್ತರ ಪ್ರದೇಶದ ಸಾವಿರಾರು ರೈತರಿಗೆ ನನ್ನದೇ ರೀತಿಯಲ್ಲಿ ಸಹಾಯ ಮಾಡಿದ್ದೇನೆ' ಎಂದು ತಾವು ಸಹಾ ಮಾಡಿರುವ ದೊಡ್ಡ ಪಟ್ಟಿಯನ್ನೇ ಅಮಿತಾಭ್​ ಹೇಳಿಕೊಂಡಿದ್ದಾರೆ.

'ಈ ಬಗ್ಗೆ ನಾನು ಇದುವರೆಗೂ ಎಲ್ಲೂ ಹೇಳಿಕೊಂಡಿರಲಿಲ್ಲ. ಆದರೆ, ಸೀಮಾ ಎನ್ನುವವರು ನನ್ನನ್ನು ಕೆಣಕಿದ ಕಾರಣ ಇಷ್ಟೆಲ್ಲಾ ಬರೆಯಬೇಕಾಯಿತು. ಸೀಮಾ ಮತ್ತು ಅವರಂತವರಿಗೆ ಬರೀ ಈ ರೀತಿ ಕಾಲೆಳೆಯುವುದಕ್ಕೆ ಮಾತ್ರ ಸಾಧ್ಯ. ಅವರು ಚೆನ್ನಾಗಿರಲಿ, ದೇವರ ಆಶೀರ್ವಾದ ಅವರ ಮೇಲೆ ಸದಾ ಇರಲಿ' ಎಂದು ಬಿಗ್​ ಬಿ ಬರೆದಿದ್ದಾರೆ.