ಕೆಲವು ಸಿನಿಮಾಗಳನ್ನು ನೋಡಿದರೆ, ಎಂಥವರಿಗಾದರೂ ಕಣ್ಣೀರು ಬರುತ್ತೆ. ಆದರೆ, ಸಿನಿತಾರೆಯರು ಭಾವುಕವಾಗಿ ಅಳುವ ದೃಶ್ಯ ಕಂಡುಬರುವುದು ಅಪರೂಪ. ಆದರೆ, ಇದೀಗ ಬಾಲಿವುಡ್ನ ಸೂಪರ್ ಸ್ಟಾರ್ ನಟ ಆಮಿರ್ ಖಾನ್ ಹೊಸ ಚಿತ್ರವೊಂದನ್ನು ನೋಡಿದ್ದು, ಭಾವುಕರಾಗಿದ್ದಾರೆ. ಹೌದು, ಹೊಸ ರೀತಿಯ ಪ್ರಯತ್ನಗಳಿಗೆ ಹೆಸರುವಾಸಿಯಾಗಿರುವ ನಟ ಅಮಿರ್ ಬಹಳ ಭಾವುಕರಾಗಿರುವುದು ತಿಳಿದುಬಂದಿದೆ. ಅಂದಹಾಗೆ, ನಟ ಆಮಿರ್ಗೆ ‘ಝುಂಡ್’ ಚಿತ್ರದ ಖಾಸಗಿ ಪ್ರದರ್ಶನವನ್ನು ಚಿತ್ರತಂಡದ ವತಿಯಿಂದ ಏರ್ಪಡಿಸಲಾಗಿತ್ತು. ನಟ ಅಮಿತಾಭ್ ಬಚ್ಚನ್ ಬಣ್ಣಹಚ್ಚಿರುವ ಈ ಚಿತ್ರ ಈಗಾಗಲೇ ಸಾಕಷ್ಟು ಸದ್ದು, ಸುದ್ದಿ ಮಾಡುತ್ತಿದೆ.
ಈ ಸಿನಿಮಾ ಎಲ್ಲಾ ಮಾಮೂಲಿ ಬಾಲಿವುಡ್ ಚಿತ್ರಗಳಂತಲ್ಲ ಎನ್ನುವುದು ಸಿನಿಮಾತಂಡದ ಹಾಗೂ ಹಲವು ಬೇರೆ ಸೆಲೆಬ್ರಿಟಿಗಳ ಮಾತಾಗಿದೆ. ಮಾರ್ಚ್ 4 ರಂದು, ಅಂದರೆ ಶುಕ್ರವಾರದಂದು ‘ಝುಂಡ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ರಿಲೀಸ್ಗೂ ಮುನ್ನ ಆಮಿರ್ಗೆ ಏರ್ಪಡಿಸಿದ್ದ ವಿಶೇಷ ಪ್ರದರ್ಶನದ ನಂತರ ನಟ ಭಾವುಕರಾಗಿ ಮಾತನಾಡಿದ್ದಾರೆ. ಹೀಗಾಗಿ, ಈ ಸಿನಿಮಾದ ಮೇಲಿನ ಕುತೂಹಲ, ನಿರೀಕ್ಷೆಗಳು ಹೆಚ್ಚಾಗಿವೆ. ಚಿತ್ರ ನೋಡಿದ ನಂತರ ಆಮಿರ್ ಬಹಳ ಭಾವುಕರಾಗಿದ್ದರು. ಅಷ್ಟೇ ಅಲ್ಲ, ಎದ್ದು ನಿಂತು ಚಪ್ಪಾಳೆಯನ್ನೂ ತಟ್ಟಿದರು. ‘‘ಖಾಸಗಿ ಪ್ರದರ್ಶನದಲ್ಲಿ ಎದ್ದು ನಿಂತು ಚಪ್ಪಾಳೆ ತಟ್ಟಿದ್ದು ಇದು ಮೊದಲ ಬಾರಿ’’ ಎಂದು ಆಮಿರ್ ಸಿನಿಮಾ ನೋಡಿದ ನಂತರ ಮಾಧ್ಯಮಗಳಿಗೆ ತಿಳಿಸಿದ್ದಾರೆ.
‘‘ಭಾರತದ ಯುವಕ-ಯುವತಿಯರ ಭಾವನೆಗಳನ್ನು ಸಮರ್ಥವಾಗಿ ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಮಕ್ಕಳು ಈ ಚಿತ್ರದಲ್ಲಿ ನಟಿಸಿರುವುದು ಬಹಳ ಅದ್ಭುತವಾಗಿದೆ’’ ಎಂದು ಹೇಳಿದ್ದಾರೆ. ಝುಂಡ್’ನಲ್ಲಿ ಕೆಲಸ ಮಾಡಿದ ಮಕ್ಕಳನ್ನು ಹೊಗಳಿದ ನಟ, ಅಮಿತಾಭ್ರನ್ನೂ ಹಾಡಿ ಹೊಗಳಿದ್ದಾರೆ. ಅಮಿತಾಭ್ ವೃತ್ತಿ ಜೀವನದಲ್ಲಿ, ಈ ಸಿನಿಮಾ ಒಂದು ಉತ್ತಮ ಸಿನಿಮಾ ಆಗಲಿದೆ ಎಂದು ಆಮಿರ್ ಭಾವಿಸಿದರು. ಈ ಹಿಂದೆ ನಟಿ ಕಂಗನಾ ಹಾಗೂ ನಟ ಇರ್ಫಾನ್ ಅಭಿನಯದ ‘ಕಟ್ಟೀ-ಬಟ್ಟೀ’, ಸಲ್ಮಾನ್ ಅಭಿನಯದ ‘ಭಜರಂಗಿ ಭಾಯಿಜಾನ್’ ನೋಡಿದಾಗಲೂ ಅಮಿರ್ ಕಣ್ಣೀರು ಹಾಕಿದ್ದಾರೆ. ಆಗ ನಟ ಟವೆಲ್ನಲ್ಲಿ ಕಣ್ಣೀರು ಒರೆಸಿಕೊಳ್ಳುತ್ತಿರುವ ದೃಶ್ಯಗಳು ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದವು.