ಸಿನಿವಾಣಿ

ಆರು ನಿರ್ದೇಶಕರಿಂದ ಒಂದು ಚಿತ್ರದ ಟೈಟಲ್​ ಅನಾವರಣ

manjunathktgns

ಬೆಂಗಳೂರು: ಹಿರಿಯ ನಿರ್ದೇಶಕ ಗಿರೀಶ್​ ಕಾಸರವಳ್ಳಿ, ಕಮರ್ಷಿಯಲ್​ ಚಿತ್ರಗಳ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದು ಬಹಳ ಕಡಿಮೆಯೇ. ಆದರೆ, ಇತ್ತೀಚೆಗೆ ಒಲವು ಸಿನಿಮಾ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಭಾಗವಹಿಸಿ, ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್​ ಮಾಡಿದ್ದಾರೆ.

ಇನ್ನೊಂದು ವಿಶೇಷವೆಂದರೆ, ಗಿರೀಶ್ ಕಾಸರವಳ್ಳಿ, ಬಿ.ಸುರೇಶ್, ಎಂ.ಕೆ.ಸುಬ್ರಹ್ಮಣ್ಯ, ಯೋಗರಾಜ್ ಭಟ್, ಅಭಯಸಿಂಹ ಹಾಗೂ ಮಹೇಶ್ ರಾವ್ ಸೇರಿದಂತೆ ಕನ್ನಡ ಚಿತ್ರರಂಗದ ಆರು ಜನಪ್ರಿಯ ನಿರ್ದೇಶಕರು ಈ ಚಿತ್ರದ ಶೀರ್ಷಿಕೆಯ ಅನಾವರಣ ಮಾಡಿದ್ದಾರೆ. ಅಂದಹಾಗೆ, ಈ ಚಿತ್ರದ ಹೆಸರೇನು ಗೊತ್ತಾ? 'ಅಮರ ಪ್ರೇಮಿ ಅರುಣ್'.

ಇಷ್ಟೆಲ್ಲಾ ನಿರ್ದೇಶಕರು ಈ ಚಿತ್ರದ ಮುಹೂರ್ತಕ್ಕೆ ಬಂದಿದ್ದಕ್ಕೂ ಕಾರಣವಿದೆ. ಅದೇನೆಂದರೆ, ನಿರ್ದೇಶಕ ಪ್ರವೀಣ್​ ಈ ಆರೂ ನಿರ್ದೇಶಕರ ಜತೆಗೂ ಕೆಲಸ ಮಾಡಿದ್ದಾರಂತೆ. ಬಿ. ಸುರೇಶ ನಿರ್ಮಾಣದ ಮತ್ತು ಅಭಯ್​ ಸಿಂಹ ನಿರ್ದೇಶನದ 'ಸಕ್ಕರೆ', ಗಿರೀಶ್​ ಕಾಸರವಳ್ಳಿ ನಿರ್ದೇಶನದ 'ಕೂರ್ಮಾವತಾರ' ಹೀಗೆ ಹಲವು ಚಿತ್ರಗಳಿಗೆ ಪ್ರವೀಣ್​ ಕೆಲಸ ಮಾಡಿದ್ದು, ಅದೇ ಕಾರಣಕ್ಕೆ ನಿರ್ದೇಶಕರು ಬಂದು ಶುಭಕೋರಿದ್ದಾರೆ.

ಇದು ಬಳ್ಳಾರಿ ಜಿಲ್ಲೆಯಲ್ಲಿ ನಡೆಯುವ ಕಥೆಯಂತೆ. ಅಷ್ಟೇ ಅಲ್ಲ, ಚಿತ್ರದಲ್ಲಿ ನಟಿಸುತ್ತಿರುವ ಎಲ್ಲ ಕಲಾವಿದರು ಸಹ ಪ್ರಾಂತೀಯ ಭಾಷೆಯನ್ನು ಅಭ್ಯಾಸ ಮಾಡುತ್ತಿದ್ದಾರಂತೆ. ಬಳ್ಳಾರಿಯ ಪ್ರಾದೇಶಿಕತೆ ತೋರಿಸುತ್ತಾ, ಪ್ರೇಮಕಥೆ ಹೇಳುವ ಒಂದು ಪ್ರಯತ್ನ ಈ ಚಿತ್ರದಲ್ಲಾಗುತ್ತಿದೆ ಎನ್ನುವ ಪ್ರವೀಣ್​, ಇದೊಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರ ಎನ್ನುತ್ತಾರೆ. ಯುಗಾದಿ ಹಬ್ಬದ ನಂತರ ಚಿತ್ರೀಕರಣ ಆರಂಭವಾಗಲಿದೆಯಂತೆ.

ಈ‌ ಹಿಂದೆ 'ಕಹಿ' ಚಿತ್ರದಲ್ಲಿ ಅಭಿನಯಿಸಿದ್ದ ಹರಿಶರ್ವಾ ಈ ಚಿತ್ರದ ನಾಯಕರಾಗಿ ನಟಿಸುತ್ತಿದ್ದಾರೆ. ಜತೆಗೆ ಧರ್ಮಣ್ಣ, ಮಹೇಶ್ ಬಂಗ್, ಸುಶ್ಮಿತಾ ಮುಂತಾದ ಕಲಾವಿದರು ಮುಂತಾದವರು ನಟಿಸುತ್ತಿದ್ದಾರೆ. ಚಿತ್ರಕ್ಕೆ ಕಿರಣ್​ ರವೀಂದ್ರನಾಥ್​ ಸಂಗೀತ ಸಂಯೋಜಿಸಿದರೆ, ಪ್ರವೀಣ್​ ಕುಮಾರ್ ಛಾಯಾಗ್ರಹಣ ಮಾಡುತ್ತಿದ್ದಾರೆ.