ಸಿನಿವಾಣಿ

ಪುಷ್ಪ ಚಿತ್ರ ತಂಡಕ್ಕೆ ಅಲ್ಲು ಅರ್ಜುನ್​​ ನೀಡಿದ ಉಡುಗೊರೆಗಳೇನು? ಏನಂದ್ರು ಸ್ಟೈಲಿಶ್​​ ಸ್ಟಾರ್​?

ಹೈದರಾಬಾದ್: ಸದ್ಯ 'ಪುಷ್ಪ' ಸಿನಿಮಾ ರಿಲೀಸ್​​ಗೆ ರೆಡಿಯಾಗಿದ್ದು, ಚಿತ್ರದ ನಾಯಕ ನಟ ಅಲ್ಲು ಅರ್ಜುನ್ ಅವರು ಸಿನಿಮಾ ತಯಾರಿಯಾಗಿರುವು ವಿಧಾನದ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಜೊತೆಗೆ, ತಮ್ಮ ಇಡೀ ಚಿತ್ರತಂಡಕ್ಕೆ ಅವರು ಉಡುಗೊರೆಗಳನ್ನು ನೀಡಿದ್ದಾರೆ. 'ಪುಷ್ಪ' ಸಿನಿಮಾಗಾಗಿ ಇಡೀ ತಂಡ ಶ್ರಮಸಿದ್ದು, ಅಲ್ಲು ಅರ್ಜುನ್ ತಂಡದಲ್ಲಿರುವ ಸುಮಾರು 40 ಮುಖ್ಯ ಸದಸ್ಯರಿಗೆ ತಲಾ 1 ಗ್ರಾಂ (11.66 ಗ್ರಾಂ) ಚಿನ್ನದ ನಾಣ್ಯಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಅಲ್ಲದೇ, ಇಡೀ ಚಿತ್ರದ ನಿರ್ಮಾಣ ತಂಡಕ್ಕೆ ಹಂಚಿಕೊಳ್ಳಲು ಅವರು 10 ಲಕ್ಷ ರೂಪಾಯಿಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಚಿತ್ರತಂಡದ ಮೂಲಗಳು ಖಚಿತಪಡಿಸಿವೆ. ಇದರಿಂದ, 'ಪುಷ್ಪ' ಚಿತ್ರತಂಡ ನಟನಿಗೆ ಧನ್ಯವಾದಗಳು ತಿಳಿಸಿದ್ದಾರೆ.
''ಪುಷ್ಪ, ತಂಡದ ಪ್ರತಿಯೊಬ್ಬ ಸದಸ್ಯರ ಶ್ರಮದಿಂದ, ಕೆಲಸದಿಂದ ಅಲ್ಲು ಅರ್ಜುನ್ ತುಂಬಾ ಖುಷಿ ಪಟ್ಟಿದ್ದಾರೆ. ಆದ್ದರಿಂದ, ಅವರು ಚಿತ್ರತಂಡಕ್ಕೆ ಚಿನ್ನ ಮತ್ತು ನಗದು ಉಡುಗೊರೆಗಳನ್ನು ನೀಡಿ ಗೌರವಿಸಲು ಬಯಸಿದ್ದರು'' ಎಂದು ತಂಡದ ಸದಸ್ಯರು ಹೇಳಿದ್ದಾರೆ. 'ಪುಷ್ಪ: ದಿ ರೈಸ್' ಡಿಸೆಂಬರ್ 17 ರಂದು ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ತೆರೆಗೆ ಬರಲು ಸಿದ್ಧವಾಗಿದೆ. ಈ ಆಕ್ಷನ್-ಥ್ರಿಲ್ಲರ್ ಕಥೆಯನ್ನು ಸುಕುಮಾರ್ ಅವರು ಬರೆದು ನಿರ್ದೇಶಿಸಿದ್ದಾರೆ. ಮುತ್ತಂಸೆಟ್ಟಿ ಮೀಡಿಯಾ ಸಹಯೋಗದೊಂದಿಗೆ ಮೈತ್ರಿ ಮೂವೀ ಮೇಕರ್ಸ್ ನಿರ್ಮಿಸಿದ 'ಪುಷ್ಪ'ದಲ್ಲಿ ಅಲ್ಲು ಅರ್ಜುನ್ ಜೊತೆ ನಟ ಫಹಾದ್ ಫಾಸಿಲ್ ಮತ್ತು ನಟಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ.
ಇನ್ನು, ನಟ ಡಾಲಿ ಧನಂಜಯ್ ಅವರು ಈ ಸಿನಿಮಾದಲ್ಲಿ ಜಾಲಿ ರೆಡ್ಡಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವುದು ಕನ್ನಡಿಗರ ಸಂತಸಕ್ಕೆ ಕಾರಣವಾಗಿದೆ. ಮತ್ತು, ನಟಿ ಸಮಂತಾ ಸಿನಿಮಾದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿರುವುದು ಪಡ್ಡೆ ಹುಡುಗರಿಗೆ ಹೈಲೈಟ್ ಆಗಿದೆ. ಆಂಧ್ರಪ್ರದೇಶದ ರಾಯಲಸೀಮಾ ಪ್ರದೇಶದ ಶೇಷಾಚಲಂ ಬೆಟ್ಟಗಳಲ್ಲಿ ನಡೆಯುವ ಕೆಂಪು ಮರಳು ಕಳ್ಳಸಾಗಣೆ ಈ ಸಿನಿಮಾದ ಕಥೆಯಾಗಿದೆ. ಚಿತ್ರದ ಸಂಗೀತವನ್ನು ದೇವಿ ಶ್ರೀ ಪ್ರಸಾದ್ ಸಂಯೋಜಿಸಿದ್ದು, ಛಾಯಾಗ್ರಹಣ ಮತ್ತು ಸಂಕಲನವನ್ನು ಮಿರೋಸ್ಲಾವ್ ಕುಬಾ ಬ್ರೋಜೆಕ್ ಮತ್ತು ಕಾರ್ತಿಕಾ ಶ್ರೀನಿವಾಸ್ ನಿರ್ವಹಿಸಿದ್ದಾರೆ. ಇತ್ತೀಚೆಗೆ, ಬಿಡುಗಡೆಯಾದ ಚಿತ್ರದ ಟ್ರೇಲರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕೇವಲ 24 ಗಂಟೆಗಳ ಒಳೆಗೆ ಐದೂ ಭಾಷೆಗಳಲ್ಲಿ ಒಟ್ಟು 30 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ.