ಸಿನಿವಾಣಿ

ಆಲಿಯಾ ಕೂದಲನ್ನು ಚಾಪ್‌ಚಾಪ್ ಮಾಡಿದ ಪ್ರೀತಿಪಾತ್ರರು ಯಾರು?

chetannadiger

ಲಾಕ್‌ಡೌನ್‌ನಿಂದ ಅದೆಷ್ಟು ಜನರಿಗೆ ಒಳ್ಳೆಯದಾಯಿತೋ ಗೊತ್ತಿಲ್ಲ? ಆದರೆ, ಬಾಲಿವುಡ್ ನಟಿ ಆಲಿಯಾ ಭಟ್‌ಗೆ ಮಾತ್ರ ಸಖತ್ ಉಪಕಾರವಾದಂತಿದೆ. ಈ 60 ದಿನಗಳಲ್ಲಿ ಅವರು ಸಾಕಷ್ಟು ಗಳಿಸಿದ್ದಾರಂತೆ.

ಈ ಮಧ್ಯೆ, ಆಲಿಯಾ ಎಲ್ಲರ ತಲೆಯಲ್ಲೂ ಒಂದು ಹುಳ ಬಿಟ್ಟಿದ್ದಾರೆ. ತಮ್ಮ ಮನೆಯ ಜಿಮ್‌ನಲ್ಲಿ ಅವರೊಂದು ಫೋಟೋ ತೆಗೆದಿದ್ದು, ಅದನ್ನು ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ನಲ್ಲಿ ಅವರು ಕಳೆದ 60 ದಿನಗಳು ತಮಗೆ ಹೇಗೆ ಸಹಾಯ ಮಾಡಿದವು ಎಂದು ಹೇಳಿಕೊಂಡಿದ್ದಾರೆ. ಕೊನೆಯಲ್ಲಿ, ತಾವು ಹೇರ್‌ಕಟ್ ಮಾಡಿಸಿಕೊಂಡಿದ್ದರ ಬಗ್ಗೆ ಪ್ರಸ್ತಾಪ ಮಾಡಿರುವ ಆಲಿಯಾ, ತಮ್ಮ ಪ್ರೀತಿಪಾತ್ರರಾದವರೊಬ್ಬರು ಆ ಹೇರ್ ಕಟ್ ಮಾಡಿದ್ದನ್ನು ಅವರು ಬಹಿರಂಗಪಡಿಸಿದ್ದಾರೆ.

‘ಮನೆಯಲ್ಲೇ ನಾನು ಹೇರ್ ಕಟ್ ಮಾಡಿಸಿಕೊಳ್ಳಬೇಕಾಯಿತು. ಬಹುಮುಖ ಪ್ರತಿಭೆಯ ಪ್ರೀತಿಪಾತ್ರರೊಬ್ಬರು ಸಹಾಯಕ್ಕೆ ಬಂದರು. ಮನೆಯಲ್ಲೇ ನನ್ನ ಕೂದಲನ್ನು ಚಾಪ್‌ಚಾಪ್ ಮಾಡಿದ್ದಾರೆ’ ಎಂದು ಆಲಿಯಾ ಭಟ್ ಹೇಳಿಕೊಂಡಿದ್ದಾರೆ.

ಅಷ್ಟಾಗುತ್ತಿದ್ದಂತೆಯೇ ಪ್ರಶ್ನೆಗಳ ಮಹಾಪೂರವೇ ಹರಿದುಬಂದಿದೆ. ಪ್ರಮುಖವಾಗಿ ಆ ಪ್ರೀತಿಪಾತ್ರರು ಯಾರು? ಎಂದು ಎಲ್ಲರೂ ತಲೆ ಕೆಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಅದು ರಣಬೀರ್ ಕಪೂರ್ ಇರಬಹುದಾ ಎಂಬ ಕುತೂಹಲ ಎಲ್ಲರದ್ದು. ಏಕೆಂದರೆ, ಲಾಕ್‌ಡೌನ್ ಶುರುವಾದಾಗಿನಿಂದ ರಣಬೀರ್ ಮತ್ತು ಆಲಿಯಾ ಬಹಳ ಹತ್ತಿರವಾಗಿದ್ದಾರೆ. ಅದರಲ್ಲೂ ರಣಬೀರ್ ತಂದೆ ರಿಷಿ ಕಪೂರ್ ನಿಧನರಾದಾಗ, ರಣಬೀರ್ ಜತೆಗೆ ಆಲಿಯಾ ಬಂಡೆಯಂತೆ ನಿಂತಿದ್ದರು. ಬಹುಶಃ ಆಲಿಯಾ ಹೇರ್‌ಕಟ್ ಮಾಡಿದ್ದು ರಣಬೀರ್ ಇರಬೇಕು ಎಂಬ ಸಂಶಯ ಎಲ್ಲರಿಗೂ ಇದೆ.

ಆದರೆ, ಆಲಿಯಾ ಮಾತ್ರ, ಈ ಬಗ್ಗೆ ಕಮಕ್ ಕಿಮಕ್ ಎನ್ನುತ್ತಿಲ್ಲ. ಎಲ್ಲರೂ ತಮ್ಮ ತಲೆಗೆ ಹುಳ ಬಿಟ್ಟುಕೊಂಡಿರುವುದನ್ನು ನೋಡಿ, ಮುಸಿಮುಸಿ ನಗುತ್ತಿದ್ದಾರೆ.