ಬಾಲಿವುಡ್ನಲ್ಲಿ ‘ಬೆಲ್ ಬಾಟಂ’ ಹೆಸರಿನ ಸಿನಿಮಾ ಘೋಷಣೆಯಾಗುತ್ತಿದ್ದಂತೆ, ಕನ್ನಡದಲ್ಲಿ ತೆರೆಕಂಡಿದ್ದ ರಿಷಭ್ ಶೆಟ್ಟಿ ಅಭಿನಯದ ಅದೇ ಹೆಸರಿನ ಸಿನಿಮಾದ ರೀಮೇಕ್ ಇರಬಹುದಾ ಎಂದು ಸಾಕಷ್ಟು ಮಂದಿ ಮಾತನಾಡಿಕೊಂಡಿದ್ದರು. ಬಳಿಕ ಅದೇ ಬೇರೆ, ಇದೇ ಬೇರೆ ಎಂದು ಗೊತ್ತಾಗುತ್ತಿದ್ದಂತೆ, ಈ ವಿಷಯವನ್ನು ಕೈಬಿಟ್ಟಿದ್ದರು. ಇದೀಗ ಅದೇ ‘ಬೆಲ್ ಬಾಟಂ’ ಚಿತ್ರಕ್ಕೆ ಪ್ರೀ-ಪ್ರೊಡಕ್ಷನ್ ಕೆಲಸಗಳು ಬಹುತೇಕ ಮುಗಿದಿದ್ದು, ನಾಯಕಿಯ ಆಯ್ಕೆ ಪ್ರಕ್ರಿಯೆಯನ್ನೂ ಮುಗಿಸಿಕೊಂಡಿದೆ. ಇದೀಗ ಸದ್ದಿಲ್ಲದೆ ಶೂಟಿಂಗ್ಗೆ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ ಚಿತ್ರತಂಡ.
ಹೌದು, ಅಕ್ಷಯ್ ಕುಮಾರ್ ನಾಯಕತ್ವದ ಬೆಲ್ಬಾಟಂ ತಂಡ ಇತ್ತೀಚೆಗಷ್ಟೇ ನಾಯಕಿಯನ್ನಾಗಿ ವಾಣಿ ಕಪೂರ್ ಅವರನ್ನು ಆಯ್ಕೆ ಮಾಡಿಕೊಂಡಿತ್ತು. ಇದೀಗ ಚಿತ್ರದ ಮತ್ತೊಂದು ಲುಕ್ ಬಿಡುಗಡೆ ಮಾಡಿ, ಸಿನಿಮಾದಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬುದಕ್ಕೆ ಸಾಕ್ಷ್ಯ ಒದಗಿಸಿದೆ. ಅಂದಹಾಗೆ, ಚಿತ್ರದ ಹೊಸ ಪೋಸ್ಟರ್ ಪ್ರಕಾರ ಲಾರಾ ದತ್ತ, ಹುಮಾ ಖುರೇಶಿ, ವಾಣಿ ಕಪೂರ್ ಇನ್ನು ಇಬ್ಬರು ನಟರಿದ್ದಾರೆ.
ಇದನ್ನೂ ಓದಿ: ಇಲ್ಲಿ ಬೆಳೆಯುವುದು ಸುಲಭವಲ್ಲ
ಆಗಸ್ಟ್ ವೇಳೆಗೆ ಲಂಡನ್ಗೆ ತೆರಳುವ ಪ್ಲ್ಯಾನ್ ಹಾಕಿರುವ ತಂಡ, ಶೂಟಿಂಗ್ಗೆ ಚಾಲನೆ ನೀಡಲಿದೆ. ಸದ್ಯ ಕರೊನಾ ಹಾವಳಿ ವಿಚಾರವಾಗಿ ಲಂಡನ್ನಲ್ಲೂ ಸಾವಿರಾರು ಪ್ರಕರಣಗಳು ವರದಿಯಾಗಿದ್ದು, ಅಲ್ಲಿಯ ಪರಿಸ್ಥಿತಿಯೂ ಸರಿಯಿಲ್ಲ ಎಂಬುದು ಈಗಾಗಲೇ ಗೊತ್ತಾಗಿದೆ. ಇದೀಗ ಅದೇ ನೆಲದಲ್ಲಿ ಅಕ್ಷಯ್ಕುಮಾರ್ ಆ್ಯಂಡ್ ಟೀಮ್ ಶೂಟಿಂಗ್ ಮಾಡಿಕೊಳ್ಳುವ ಪ್ಲ್ಯಾನ್ ಹಾಕಿದೆ. ಪೂಜಾ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ರಂಜಿತ್ ಎಂ ತಿವಾರಿ ನಿರ್ದೇಶನ ಮಾಡಲಿದ್ದಾರೆ. 2021ರ ಏಪ್ರಿಲ್ 2ಕ್ಕೆ ಈ ಸಿನಿಮಾ ಬಿಡುಗಡೆ ಆಗಲಿದೆ.
ಇನ್ನು ನಾಯಕಿ ವಿಚಾರಕ್ಕೆ ಬರುವುದಾದರೆ, ಈಗಾಗಲೇ ಬಾಲಿವುಡ್ ಸೇರಿದಂತೆ ಬೇರೆಬೇರೆ ಭಾಷೆಯ ಚಿತ್ರರಂಗಗಳಲ್ಲಿ ಕಾಣಿಸಿಕೊಂಡಿರುವ ವಾಣಿ ಕಪೂರ್, ಇದೇ ಮೊದಲ ಬಾರಿಗೆ ಅಕ್ಷಯ್ ಕುಮಾರ್ ಜತೆಗೆ ನಟಿಸುತ್ತಿದ್ದಾರೆ. 1980ರ ಕಾಲಘಟ್ಟದಲ್ಲಿ ನಡೆಯುವ ಕಥೆ ಇದಾಗಿದ್ದು, ಡಿಫರೆಂಟ್ ಲುಕ್ನಲ್ಲಿ ವಾಣಿ ಕಾಣಿಸಿಕೊಳ್ಳುತ್ತಿದ್ದಾರಂತೆ. (ಏಜೆನ್ಸೀಸ್)