ಮುಂಬೈ: ಬಾಲಿವುಡ್ನ ಪ್ರಸಿದ್ಧ ನಟ ಅಕ್ಷಯ್ ಕುಮಾರ್ ಮಾರ್ಚ್ 18ರಂದು ಅಯೋಧ್ಯೆಗೆ ತೆರಳಲಿದ್ದಾರೆ. ರಾಮ್ಸೇತು ಸಿನಿಮಾ ಮುಹೂರ್ತಕ್ಕಾಗಿ ಅಲ್ಲಿಗೆ ತೆರಳುತ್ತಿರುವುದಾಗಿ ತಿಳಿಸಲಾಗಿದೆ.
ಕುಟುಂಬದೊಂದಿಗೆ ಮಾಲ್ಡೀವ್ಸ್ ಪ್ರವಾಸ ಮುಗಿಸಿ ಇದೀಗ ಮುಂಬೈಗೆ ವಾಪಾಸಾಗಿರುವ ಅಕ್ಷಯ್ ಕುಮಾರ್ ಅಯೊಧ್ಯೆಯಲ್ಲಿ ರಾಮ್ ಸೇತು ಸಿನಿಮಾದ ಮುಹೂರ್ತ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇವರಿಗೆ ನಿರ್ಮಾಪಕ ಚಂದ್ರಪ್ರಕಾಶ್ ದ್ವಿವೇದಿ ಮತ್ತು ನಿರ್ದೇಶಕ ಅಭಿಷೇಕ್ ಶರ್ಮಾ ಸಾಥ್ ಕೊಡಲಿದ್ದಾರೆ.
ರಾಮ್ ಸೇತು ಸಿನಿಮಾದಲ್ಲಿ ಅಕ್ಷಯ್ ಪುರಾತತ್ವಶಾಸ್ತ್ರಜ್ಞನಾಗಿ ಕಾಣಿಸಿಕೊಳ್ಳಲಿದ್ದಾರೆ. ಭಾರತದ ಮತ್ತು ವಿದೇಶಗಳ ಪ್ರಸಿದ್ಧ ಪುರಾತತ್ವಶಾಸ್ತ್ರಜ್ಞನರಿಂದ ಸ್ಫೂರ್ತಿ ಪಡೆದು ಈ ಪಾತ್ರವನ್ನು ಹೆಣೆದಿರುವುದಾಗಿ ಅಭಿಷೇಕ್ ಶರ್ಮಾ ತಿಳಿಸಿದ್ದಾರೆ. ಈ ಚಿತ್ರದಲ್ಲಿ ಅಕ್ಷಯ್ ಅವತಾರ ಬೇರೆ ಎಲ್ಲ ಸಿನಿಮಾಗಳಿಗಿಂತ ವಿಭಿನ್ನವಾಗಿರಲಿದೆ. ಸಿನಿಮಾದ ಬಹುತೇಕ ಚಿತ್ರೀಕರಣ ಮುಂಬೈನಲ್ಲೇ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
2020ರ ದೀಪಾವಳಿ ಹಬ್ಬದಂದು ಅಕ್ಷಯ್ ಕುಮಾರ್ ರಾಮ್ ಸೇತು ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದರು. ರಾಮನ ಬ್ಯಾಕ್ಗ್ರೌಂಡ್ ಇದ್ದು, ಮುಂದಿರುವ ಅಕ್ಷಯ್ ಕುತ್ತಿಗೆಗೆ ಕೇಸರಿ ಶಾಲು ಧರಿಸಿದ್ದು, ಸಿನಿ ಪ್ರಿಯರ ಮನಸ್ಸು ಗೆದ್ದಿತ್ತು. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ