ಸಿನಿವಾಣಿ

ಸುಳ್ಳು ಸುದ್ದಿ ಹಬ್ಬಿಸಿದ್ರೆ ನೋಡಿ ಏನ್ಮಾಡ್ತೀನಿ ...

chetannadiger

ಅಕ್ಷಯ್ ಕುಮಾರ್ ನಿಜಕ್ಕೂ ಗರಂ ಆಗಿ ಹೋಗಿದ್ದಾರೆ. ಅದಕ್ಕೆ ಕಾರಣ, ಅವರ ಮೇಲಿನ ಸುಳ್ಳು ಸುದ್ದಿಗಳು. ಕಳೆದ ಹಲವು ವರ್ಷಗಳಿಂದ ತಮ್ಮ ಬಗ್ಗೆ ಹರಡಿರುವ ಸುಳ್ಳು ಸುದ್ದಿಗಳ ಬಗ್ಗೆ ಪ್ರತಿಕ್ರಿಯಿಸುತ್ತಲೇ ಬಂದಿರುವ ಅಕ್ಷಯ್, ಈ ಬಾರಿ ಸಿಡಿದೆದ್ದಿದ್ದಾರೆ.

ಇಷ್ಟಕ್ಕೂ ಆಗಿದ್ದೇನು? ಎಂಬ ಪ್ರಶ್ನೆ ಬರಬಹುದು. ಲಾಕ್‌ಡೌನ್ ಸಮಯದಲ್ಲಿ ಅಕ್ಷಯ್, ತಮ್ಮ ಸಹೋದರಿ ಮಕ್ಕಳೊಂದಿಗೆ ಊರಿಗೆ ಹೋಗುವುದಕ್ಕೆ, ಒಂದಿಡೀ ಚಾರ್ಟೆರ್ಡ್ ಫ್ಲೈಟ್ ಬುಕ್ ಮಾಡಿದ್ದರು. ಆ ಮೂಲಕ ಸಹೋದರಿಯನ್ನು ಊರಿಗೆ ಕಳುಹಿಸಿಕೊಟ್ಟರು ಎಂಬ ಸುದ್ದಿಯೊಂದು, ಕಳೆದೆರೆಡು ದಿನಗಳಿಂದ ಹರಿದಾಡುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಅವರು, ‘ಯಾರ್ರೀ ಅದು ನನ್ನ ಬಗ್ಗೆ ಹೀಗೆಲ್ಲಾ ಸುಳ್ಳು ಸುದ್ದಿಗಳನ್ನು ಹಬ್ಬಿಸೋದು. ನನ್ನ ಸಹೋದರಿ, ಲಾಕ್‌ಡೌನ್ ಸಮಯದಲ್ಲಿ ಮನೆ ಬಿಟ್ಟು ಎಲ್ಲೂ ಹೋಗಿಲ್ಲ. ಅಷ್ಟೇ ಅಲ್ಲ, ಆಕೆಗಿರುವುದು ಒಂದೇ ಮಗು, ಎರಡಲ್ಲ. ಈ ತರಹ ಸುಳ್ಳು ಸುದ್ದಿಗಳನ್ನ ನನ್ನ ಬಗ್ಗೆ ಹಬ್ಬಿಸುತ್ತಿದ್ದರೆ, ನಾನು ಸುಮ್ಮನಿರೋಲ್ಲ. ಲೀಗಲ್ ಆ್ಯಕ್ಷನ್ ತೆಗೆದುಕೊಳ್ಳುತ್ತೇನೆ’ ಎಂದು ಸಿಟ್ಟಾಗಿದ್ದಾರೆ ಅಕ್ಷಯ್.

ಕೈ ತುಂಬಾ ಕೆಲಸವಿರುವ ಅಕ್ಷಯ್, ಸದ್ಯಕ್ಕೆ ಲಾಕ್‌ಡೌನ್‌ನಿಂದ ಮನೆಯಲ್ಲೇ ಕೂತುಕೂತು ಸುಸ್ತಾಗಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಷ್ಟರಲ್ಲಿ ಅವರ ‘ಸೂರ್ಯವಂಶಿ’ ಮತ್ತು ‘ಲಕ್ಷ್ಮೀ ಬಾಂಬ್’ ಚಿತ್ರಗಳು ಬಿಡುಗಡೆಯಾಗಬೇಕಿದ್ದವು. ಇನ್ನು ‘ಪೃಥ್ವಿರಾಜ್’ ಮತ್ತು ‘ಬಚ್ಚನ್ ಪಾಂಡೆ’ ಚಿತ್ರಗಳಲ್ಲಿ ಅವರು ನಟಿಸಬೇಕಿತ್ತು. ಆದರೆ, ಲಾಕ್‌ಡೌನ್‌ನಿಂದಾಗಿ, ಅವೆಲ್ಲವೂ ತಲೆ ಕೆಳಗಾಗಿವೆ.