ಮುಂಬೈ: ಬಹುಶಃ ಇದು ನಟ ಅಕ್ಷಯ್ ಕುಮಾರ್ ಅವರ ಜೀವನದ ಅತ್ಯಂತ ಬೇಸರದ ಜನ್ಮದಿನ ಎಂದರೂ ತಪ್ಪೇನಲ್ಲ. ಏಕೆಂದರೆ ಈ ಸಲದ ಅವರ ಜನ್ಮದಿನ ದುಃಖದಲ್ಲೇ ಕಳೆದುಹೋಗಿದೆ. ತಮ್ಮ ಐವತ್ತನಾಲ್ಕನೇ ವರ್ಷದ ಜನ್ಮದಿನದ ಬೆನ್ನಿಗೇ ಅವರು ಸಂತಾಪ-ಹಾರೈಕೆ ಎರಡಕ್ಕೂ ಒಟ್ಟಿಗೇ ಧನ್ಯವಾದ ಸಲ್ಲಿಸಿದ್ದಾರೆ.
ನಟ ಅಕ್ಷಯ್ ಕುಮಾರ್ ಅವರ ಜನ್ಮದಿನವಾದ ಸೆ. ೯ರ ಹಿಂದಿನ ದಿನವೇ ಅವರ ತಾಯಿ ನಿಧನರಾಗಿದರು. ʼಆಕೆ ನನ್ನ ಅಂತಃಶಕ್ತಿ ಆಗಿದ್ದಳು. ಇಂದು ನನ್ನ ಆಂತರ್ಯದಲ್ಲಿ ಅಪಾರ ನೋವನ್ನು ಅನುಭವಿಸುತ್ತಿದ್ದೇನೆ. ನನ್ನ ತಾಯಿ ಶ್ರೀಮತಿ ಅರುಣಾ ಭಾಟಿಯಾ ಇಂದು ಶಾಂತಿಯುತವಾಗಿ ಈ ಜಗತ್ತನ್ನು ತೊರೆದು ಬೇರೆ ಲೋಕದಲ್ಲಿ ನನ್ನ ತಂದೆಯನ್ನು ಸೇರಿಕೊಂಡರುʼ ಎಂದು ಅವರು ಬುಧವಾರ ತಾಯಿಯ ಅಗಲಿಕೆಯ ಕುರಿತು ಹೇಳಿಕೊಂಡಿದ್ದರು.
ಮರುದಿನ ಅಂದರೆ ನಿನ್ನೆ ತಮ್ಮ ಜನ್ಮದಿನದ ಸಲುವಾಗಿ ತಾಯಿಯೊಂದಿಗಿದ್ದ ಒಂದು ಹಳೆಯ ಫೋಟೋ ಹಂಚಿಕೊಂಡು ತಮ್ಮ ಸಂಕಟವನ್ನು ವ್ಯಕ್ತಪಡಿಸಿದ್ದಾರೆ. ʼಈ ಥರ ಆಗುವುದು ಎಂದಿಗೂ ಇಷ್ಟವಿರಲಿಲ್ಲ. ಆದರೆ ಅಮ್ಮ ನನಗೆ ಅಲ್ಲಿಂದಲೇ ಜನ್ಮದಿನದ ಶುಭಾಶಯವನ್ನು ಹಾಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಮಾತ್ರವಲ್ಲ ತಾಯಿಗೆ ಸಾವಿಗೆ ಸಂತಾಪ ಸೂಚಿಸಿದ, ತಮ್ಮ ಜನ್ಮದಿನಕ್ಕೆ ಶುಭ ಹಾರೈಸಿದ ಎಲ್ಲರಿಗೂ ಒಟ್ಟಿಗೇ ಧನ್ಯವಾದ ಸಲ್ಲಿಸಿ, ಜೀವನ ಸಾಗುತ್ತದೆʼ ಎಂಬುದಾಗಿ ಹೇಳಿಕೊಂಡಿದ್ದಾರೆ.