ಸಿನಿವಾಣಿ

'ವಾಲಿಮೈ' ಚಿತ್ರೀಕರಣ ಸಂದರ್ಭದಲ್ಲಿ ಅಜಿತ್​ಗೆ ಏಟು

ಹೈದರಾಬಾದ್​: ತಮ್ಮ ಸಮಕಾಲೀನರೆಲ್ಲಾ ಚಿತ್ರೀಕರಣಕ್ಕೆ ಹೋಗುವುದೋ, ಬೇಡವೋ ಎಂದು ಯೋಚಿಸುತ್ತಿರುವಾಗ ಕಾಲಿವುಡ್​ನ ಅತ್ಯಂತ ಜನಪ್ರಿಯ ನಟ ಅಜಿತ್​ ಮಾತ್ರ 'ವಾಲಿಮೈ' ಎಂಬ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.

ಮೂಲಗಳ ಪ್ರಕಾರ, ಚಿತ್ರೀಕರಣದ ಸಂದರ್ಭದಲ್ಲಿ ಅಜಿತ್​ಗೆ ಏಟು ಬಿದ್ದಿದ್ದು, ಒಂದು ತಿಂಗಳ ಕಾಲ ಅವರು ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆಯಂತೆ.

ವಾಲಿಮೈ ಚಿತ್ರಕ್ಕಾಗಿ ಹೈದರಾಬಾದ್​ನಲ್ಲಿ ಕೆಲವು ದಿನಗಳಿಂದ ಚಿತ್ರೀಕರಣ ನಡೆಯುತ್ತಿದೆ. ಹೊಡೆದಾಟದ ಚಿತ್ರೀಕರಣದ ಸಂದರ್ಭದಲ್ಲಿ ಅವರಿಗೆ ಏಟು ಬಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಲಾಯಿತಂತೆ.

ಈ ತರಹದ ಏಟುಗಳು ಸಾಕಷ್ಟು ತಿಂದಿರುವುದರಿಂದ, ಚಿತ್ರೀಕರಣವನ್ನು ಮುಂದುವರೆಸುವ ಯೋಚನೆ ಅಜಿತ್​ಗಿತ್ತಂತೆ. ಆದರೆ, ವೈದ್ಯರು ಮಾತ್ರ ಒಂದು ತಿಂಗಳ ಬ್ರೇಕ್​ ತೆಗೆದುಕೊಳ್ಳುವುದಕ್ಕೆ ಸೂಚಿಸಿದ್ದಾರೆ. ಕೊನೆಗೆ ವೈದ್ಯರು ಮತ್ತು ಚಿತ್ರತಂಡದವರ ಸಲಹೆಯ ಮೇರೆಗೆ, ಚಿತ್ರೀಕರಣಕ್ಕೆ ಬ್ರೇಕ್​ ಕೊಟ್ಟು, ಅಜಿತ್​ ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ.

ಅಂದಹಾಗೆ, ಅಜಿತ್​ ಚಿತ್ರೀಕರಣ ಸಮಯದಲ್ಲಿ ಈ ರೀತಿ ಏಟು ಮಾಡಿಕೊಳ್ಳುತ್ತಿರುವುದು ಮೊದಲೇನಲ್ಲ. ಈಗಾಗಲೇ ಕೆಲವು ಚಿತ್ರಗಳ ಚಿತ್ರೀಕರಣವಾಗ ಅಜಿತ್​ಗೆ ಕೈಕಾಲುಗಳಿಗೆ ಏಟು ಬಿದ್ದಿದ್ದು, ಈಗ ಅದಕ್ಕೆ ಹೊಸ ಸೇರ್ಪಡೆಯಾಗಿದೆ.