ಸಿನಿವಾಣಿ

ಕೆಜಿಎಫ್​​-3ನಲ್ಲಿ ಅಜಿತ್ ನಟಿಸ್ತಾರಾ? ಒಂದೇ ಮಾತಿನಲ್ಲಿ ಫ್ಯಾನ್ಸ್​ ಕನಸು ನುಚ್ಚುನೂರು ಮಾಡಿದ ಮ್ಯಾನೇಜರ್

ಚೆನ್ನೈ: ಬ್ಲಾಕ್​ಬಸ್ಟರ್​​ ಕೆಜಿಎಫ್ ಸಿನಿಮಾ​ ನಿರ್ದೇಶಕ ಪ್ರಶಾಂತ್​ ನೀಲ್​ ಅವರ ಸಿನಿಮ್ಯಾಟಿಕ್​ ಯೂನಿವರ್ಸ್​ಗೆ​ ಕಾಲಿವುಡ್​ ಸೂಪರ್​ಸ್ಟಾರ್​ ಅಜಿತ್​ ಕುಮಾರ್​ ಎಂಟ್ರಿ ಕೊಡಲಿದ್ದಾರೆ ಎಂದು ಸುದ್ದಿಯಾದಾಗಿನಿಂದ ಅಜಿತ್​ ಅವರ ಹೆಸರು ಎಲ್ಲೆಡೆ ಟ್ರೆಂಡಿಂಗ್​ನಲ್ಲಿದೆ. ನೀಲ್​ ನಿರ್ದೇಶನದ ಎರಡು ಪ್ರಾಜೆಕ್ಟ್​ಗೆ ಅಜಿತ್​ ಓಕೆ ಎಂದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಕೆಜಿಎಫ್​ ಚಾಪ್ಟರ್​ 3ನಲ್ಲಿ ಅಜಿತ್​ ನಾಯಕರಾಗಲಿದ್ದಾರೆ ಎಂಬ ಸುದ್ದಿಯೂ ಕೇಳಿಬರುತ್ತಿದೆ. ಆದರೆ, ಇದೀಗ ಈ ವದಂತಿಗೆ ಅಜಿತ್​ ಅವರ ಮ್ಯಾನೇಜರ್​ ಪೂರ್ಣ ವಿರಾಮ ಹಾಕಿದ್ದಾರೆ.

ಪ್ರಶಾಂತ್​ ನೀಲ್​ ಮತ್ತು ಅಜಿತ್ ಭೇಟಿಯಾಗಿರುವುದನ್ನು​ ಮ್ಯಾನೇಜರ್​ ಸುರೇಶ್​ ಚಂದ್ರ ಅವರು ಖಚಿತಪಡಿಸಿದ್ದಾರೆ. ಆದರೆ, ಸಿನಿಮಾ ಸೆಟ್ಟೇರಲಿದೆ ಎಂಬುದನ್ನು ಅವರು ತಿರಸ್ಕರಿಸಿದ್ದಾರೆ. ಸದ್ಯಕ್ಕೆ ಅಜಿತ್​ ಅವರು ನೀಲ್​ ಸಿನಿಮಾದಲ್ಲಿ ನಟಿಸುತ್ತಿಲ್ಲ ಎಂಬುವುದನ್ನು ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸುರೇಶ್​ ತಿಳಿಸಿದ್ದಾರೆ.

ಆನ್​ಲೈನ್​ನಲ್ಲಿ ವದಂತಿಗಳು ಹರಿದಾಡುತ್ತಿವೆ. ಆದರೆ, ಇದ್ಯಾವುದು ನಿಜವಲ್ಲ. ಆದರೆ, ಅಜಿತ್​ ಸರ್​ ಮತ್ತು ಪ್ರಶಾಂತ್​ ನೀಲ್​ ಭೇಟಿಯಾಗಿರುವುದು ಸತ್ಯ. ಈ ವೇಳೆ ಅವರು ಆತ್ಮೀಯವಾಗಿ ಮಾತನಾಡಿದರೇ ಹೊರತು, ಯಾವುದೇ ಸಿನಿಮಾ ಕುರಿತು ಚರ್ಚೆಯಾಗಿಲ್ಲ. ನಾನು ಕೂಡ ಪ್ರಶಾಂತ್ ನೀಲ್​ ಸಿನಿಮಾದಲ್ಲಿ ಅಜಿತ್ ಸರ್​ ಅವರನ್ನು ನೋಡಲು ಇಷ್ಟಪಡುತ್ತೇನೆ. ಆದರೆ, ಮುಂದಿನ ದಿನಗಳಲ್ಲಿ ಏನಾಗುತ್ತಿದೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಸುರೇಶ್​ ಹೇಳಿದರು.

ಇದು ಕೇವಲ ವದಂತಿಯಷ್ಟೇ ಎಂಬ ವಿಚಾರ ಗೊತ್ತಾಗುತ್ತಿದ್ದಂತೆ ಅಜಿತ್ ಅಭಿಮಾನಿಗಳು ತುಂಬಾ ನಿರಾಸೆಗೊಂಡಿದ್ದಾರೆ. ಭಾರಿ ಆಕ್ಷನ್ ಚಿತ್ರಕ್ಕಾಗಿ ಅಜಿತ್​ ಅವರು ನೀಲ್ ಅವರೊಂದಿಗೆ ಕೈಜೋಡಿಸುತ್ತಾರೆ ಎಂದು ಅಭಿಮಾನಿಗಳು ಭರವಸೆ ಹೊಂದಿದ್ದರು. ಅದರಲ್ಲೂ ಕೆಜಿಎಫ್​ ಚಾಪ್ಟರ್​ 3ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ, ಅದು ಕೇವಲ ವದಂತಿ ಎಂಬುದು ಇದೀಗ ಖಚಿತವಾಗಿದೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ ಅಜಿತ್ ಅವರು ತಮ್ಮ ಮುಂದಿನ ಸಿನಿಮಾ ವಿದಾಮುಯಾರ್ಚಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ಮಗಿಜ್ ತಿರುಮೇನಿ ಅವರು ನಿರ್ದೇಶಿಸಿದ್ದಾರೆ. ಈ ಚಿತ್ರವು 2024ರ ದೀಪಾವಳಿಯಂದು ಚಿತ್ರಮಂದಿರಗಳಿಗೆ ಬರಲಿದೆ. (ಏಜೆನ್ಸೀಸ್​)