ಸಿನಿವಾಣಿ

ಕಿತ್ತಾಡ್ತಿದ್ದ ವಿಜಯ್​-ಅಜಿತ್​ ಅಭಿಮಾನಿಗಳು ಒಂದಾದ್ರು ... ಏನು ಕಾರಣ?

ಕಾಲಿವುಡ್​ ನಟರಾದ ವಿಜಯ್ ಮತ್ತು ಅಜಿತ್​ ಹೆಚ್ಚೂ ಕಡಿಮೆ ಒಂದೇ ಸಮಯದಲ್ಲಿ ಚಿತ್ರರಂಗಕ್ಕೆ ಬಂದವರು ಮತ್ತು ತಮಿಳು ಚಿತ್ರರಂಗದಲ್ಲಿ ಸ್ನೇಹಿತರೆಂದು ಗುರುತಿಸಿಕೊಂಡವರು. ಆದರೆ, ಅವರ ಅಭಿಮಾನಿಗಳು ಮಾತ್ರ ಸದಾ ಕಿತ್ತಾಡುತ್ತಲೇ ಇರುತ್ತಾರೆ.

ವಿಜಯ್​ ಮತ್ತು ಅಜಿತ್​ ಅಭಿಮಾನಿಗಳು ಯಾವಾಗಲೂ, ಅವರಿಬ್ಬರಲ್ಲಿ ಯಾರು ಮೇಲು, ಯಾರು ಕೀಳು ಎಂಬ ವಿಷಯದಲ್ಲಿ ಕಿತ್ತಾಡುತ್ತಲೇ ಬಂದಿದ್ದು, ಇದರಿಂದ ಇಬ್ಬರೂ ನಟರಿಗೆ ಇದುವರೆಗೂ ಸಾಕಷ್ಟು ಇರಿಸುಮುರುಸಾಗಿದೆ. ಆದರೆ, ಇದೇ ಮೊದಲ ಬಾರಿಗೆ ವಿಜಯ್​ ಮತ್ತು ಅಜಿತ್​ ಅಭಿಮಾನಿಗಳು ಒಂದೊಳ್ಳೆಯ ಕಾರಣಕ್ಕೆ ಜತೆಯಾಗಿದ್ದಾರೆ.

ಇಷ್ಟಕ್ಕೂ ಏನದು ಕಾರಣ ಎಂಬ ಪ್ರಶ್ನೆ ಬರಬಹುದು. ವಿಷಯ ಏನೆಂದರೆ, ವಿಜಯ್​ ಅವರ ಅಭಿಮಾನಿಯೊಬ್ಬನ ಮಾವ ಅನಾರೋಗ್ಯಕ್ಕೀಡಾದರು. ಕಷ್ಟದಲ್ಲಿದ್ದ ಆತ, ಸೋಷಿಯಲ್​ ಮೀಡಿಯಾ ಮೂಲಕ ಧನಸಹಾಯ ಸಾಧ್ಯವಾ ಎಂದು ವಿಜಯ್​ ಅಭಿಮಾನಿಗಳಲ್ಲಿ ಕೇಳಿದ. ಇದಕ್ಕೆ ವಿಜಯ್​ ಅಭಿಮಾನಿಗಳು ಧನಸಹಾಯ ಮಾಡಿರುವುದಷ್ಟೇ ಅಲ್ಲ, ಅಜಿತ್​ ಅವರ ಹಲವು ಅಭಿಮಾನಿಗಳು ಸಹ ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದಾರೆ ಎನ್ನುವುದು ವಿಶೇಷ.

ವಿಜಯ್​ ಮತ್ತು ಅಜಿತ್​ ಅಭಿಮಾನಿಗಳು ಹೀಗೆ ಜತೆಗೆ ಸೇರಿ ಸಹಾಯ ಮಾಡುತ್ತಿರುವುದು, ಇದೀಗ ಸಾಕಷ್ಟು ಚರ್ಚೆಯಾಗುತ್ತಿದ್ದು, ಅಜಿತ್​ವಿಜಯ್​ಪ್ರೈಡ್​ಆಫ್​ಇಂಡಿಯಾ ಎಂಬ ಹ್ಯಾಶ್​ಟ್ಯಾಗ್​ ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡ್​ ಆಗುತ್ತಿದೆ.

ಇಬ್ಬರೂ ಜನಪ್ರಿಯ ನಟರ ಅಭಿಮಾನಿಗಳು ಫಾರ್​ ಎ ಚೇಂಜ್​ ಹೀಗೆ ಜರೆಯಾಗುತ್ತಿರುವುದು ಬೇರೆಯವರಿಗೂ ಖುಷಿ ನೀಡುತ್ತಿದೆ. ಈ ಕುರಿತು ಬೇರೆಯವರು ಸಹ ಪ್ರತಿಕ್ರಿಯಿಸುತ್ತಿದ್ದು, ಇಬ್ಬರ ಅಭಿಮಾನಿಗಳು ಹೀಗೆ ಜತೆಯಾದರೆ ನೋಡುವುದಕ್ಕೆ ಎಷ್ಟು ಚೆಂದ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.