ರಣಬೀರ್​, ಯಶ್​ ಅಲ್ಲವೇ ಅಲ್ಲ! ರಾಮಾಯಣ ಭಾಗ 2ರಲ್ಲಿ ಇವರ ಪಾತ್ರವೇ ಎಲ್ಲರ ಕಣ್ಮನ ಸೆಳೆಯೋದು | Ramayana Part 2  
ಸಿನಿವಾಣಿ

ರಣಬೀರ್​, ಯಶ್​ ಅಲ್ಲವೇ ಅಲ್ಲ! ರಾಮಾಯಣ ಭಾಗ 2ರಲ್ಲಿ ಇವರ ಪಾತ್ರವೇ ಎಲ್ಲರ ಕಣ್ಮನ ಸೆಳೆಯೋದು | Ramayana Part 2

Ramayana Part 2: ಪ್ರಸ್ತುತ ಭಾರತ ಸೇರಿದಂತೆ ಜಾಗತಿಕ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ನಿತೇಶ್​ ತಿವಾರಿ ನಿರ್ದೇಶನದ ಹಾಗೂ ಯಶ್​, ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಅಭಿನಯದ ರಾಮಾಯಣ ಸದ್ಯ ಬಾಕ್ಸ್ ಆಫೀಸ್​ನಲ್ಲಿ 1,574 ಕೋಟಿ ರೂ. ಕ್ಲಬ್ ಸೇರಿ ಹಳೆಯ ದಾಖಲೆಗಳನ್ನು ಉಡೀಸ್ ಮಾಡುತ್ತಿದೆ. ಈ ಮಧ್ಯೆ, ಚಿತ್ರದಲ್ಲಿ ಮಹಾಋಷಿ ವಿಶ್ವಮಿತ್ರ ಪಾತ್ರದಲ್ಲಿ ಮಿಂಚಿರುವ ನಟ ಅಜಿಂಕ್ಯಾ ಡಿಯೋ, ಮುಂಬರುವ ರಾಮಾಯಣ ಭಾಗ 2ರ ಬಗ್ಗೆ ಸಖತ್ ಇಂಟ್ರೆಸ್ಟಿಂಗ್ ಹೇಳಿಕೆಗಳನ್ನು ನೀಡಿದ್ದಾರೆ.

4 ಸಾವಿರ ಕೋಟಿ ರೂ.

ಎರಡೂ ಭಾಗ ಸೇರಿಸಿದರೆ ಒಟ್ಟು 4 ಸಾವಿರ ಕೋಟಿ ರೂ. ಬಜೆಟ್​ನಲ್ಲಿ ನಿರ್ಮಾಣವಾಗಿರುವ ರಾಮಾಯಣ ಚಿತ್ರದ ಮೊದಲ ಭಾಗಕ್ಕೆ ನಿರೀಕ್ಷಿತ ಗೆಲುವು ಸಿಕ್ಕಿದ್ದೇ ಆದರೂ ಎರಡನೇ ಭಾಗದ ಮೇಲೆ ಸಿನಿಪ್ರಿಯರ ಕಣ್ಣು ಮೂಡಿದೆ. ಇದು ಚಿತ್ರತಂಡದ ಮೇಲೆ ಇನ್ನಷ್ಟು ಜವಾಬ್ದಾರಿಯನ್ನು ಹೆಚ್ಚಿಸಿದ್ದು, ಈ ಮಹಾಕಾವ್ಯದ ಕಥೆಯನ್ನು ಮೂರನೇ ಭಾಗದೊಂದಿಗೆ ಮುಂದುವರಿಸಲಾಗುತ್ತಾ ಎಂಬ ಕುತೂಹಲಕಾರಿ ಪ್ರಶ್ನೆಗಳೂ ಸಹ ಕೇಳಿಬಂದಿವೆ. ಇದಕ್ಕೆ ಸಂಬಂಧಿಸಿದಂತೆ ಅಜಿಂಕ್ಯಾ​ ಮೌನ ಮುರಿದಿದ್ದಾರೆ.

ಮೂರನೇ ಭಾಗ?

ಮೂರನೇ ಭಾಗದ ಬಗ್ಗೆ ನನಗೆ ಸದ್ಯದ ಮಟ್ಟಿಗೆ ಯಾವುದೇ ಮಾಹಿತಿ ಇಲ್ಲದಿದ್ದರೂ, ಚಿತ್ರತಂಡ ಅಂತಹ ನಿರ್ಧಾರವನ್ನು ತೆಗೆದುಕೊಂಡರೆ ತುಂಬಾ ಖುಷಿ ಆಗುತ್ತೆ. ನಾನು 'ರಾಮಾಯಣ'ದ ಮೂರನೇ ಭಾಗದ ಬಗ್ಗೆ ನಿರ್ದೇಶಕರಿಂದ ಅಥವಾ ಚಿತ್ರತಂಡದಿಂದ ಯಾವುದೇ ವಿಷಯ ಕೇಳಿಲ್ಲ. ಹಾಗಾಗಿ, ಈ ಕುರಿತು ನಾನು ಯಾವುದೇ ಉತ್ತರ ಕೊಡಲು ಸಾಧ್ಯವಿಲ್ಲ. ಆದ್ರೆ, ನಿರ್ಮಾಪಕರು ಈ ವಿಷಯವನ್ನು ಪ್ರಸ್ತಾಪಿಸಿದರೆ ಖಂಡಿತ ನಾನೇ ಜಾಸ್ತಿ ಸಂತೋಷ ಪಡೋದು. ಕಾರಣ, ಆಗ ನನ್ನ ಪಾತ್ರಕ್ಕೆ ಇನ್ನಷ್ಟು ಮಹತ್ವ ಸಿಗಲಿದೆ ಎಂದಿದ್ದಾರೆ.

ಮೂರನೇ ಭಾಗಕ್ಕೆ ಏಕೆ ನಿಲ್ಲಿಸಬೇಕು? ಇದನ್ನು ಐದು ಭಾಗಗಳಾಗಿ ಮಾಡಿದರೆ ಇನ್ನೂ ಚೆನ್ನಾಗಿರುತ್ತೆ. ಅಸಲಿಗೆ, ಎರಡನೇ ಭಾಗದ ಬಹುತೇಕ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ. ಮೊದಲ ಭಾಗಕ್ಕೆ ಹೋಲಿಸಿದರೆ, ಎರಡನೇ ಭಾಗವನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಚಿತ್ರೀಕರಿಸಲಾಗುತ್ತಿದೆ. ಈ ಭಾಗದ ಪ್ರಮುಖ ಆಕರ್ಷಣೆಯೆಂದರೆ, ಅದು ರಣಬೀರ್​ ಮತ್ತು ಯಶ್​ ಪಾತ್ರಗಳಲ್ಲ. ಬದಲಿಗೆ ಸನ್ನಿ ಡಿಯೋಲ್ ಅವರ ಹನುಮಂತನ ಪಾತ್ರ ಎಂದು ಹೇಳಿದ್ದಾರೆ.

ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾದಲ್ಲಿ ರಾಮನ ಪಾತ್ರದಲ್ಲಿ ರಣಬೀರ್ ಕಪೂರ್, ಲಕ್ಷ್ಮಣನ ಪಾತ್ರದಲ್ಲಿ ರವಿ ದುಬೆ, ಸೀತಾ ದೇವಿಯ ಪಾತ್ರದಲ್ಲಿ ಸಾಯಿ ಪಲ್ಲವಿ ಮತ್ತು ರಾವಣನ ಪಾತ್ರದಲ್ಲಿ ಯಶ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಉಳಿದಂತೆ ಕಾಜಲ್ ಅಗರ್ವಾಲ್, ರಾಕುಲ್ ಪ್ರೀತ್ ಸಿಂಗ್, ವಿವೇಕ್ ಒಬೆರಾಯ್, ಕುನಾಲ್ ಕಪೂರ್, ಆದಿನಾಥ್ ಕೊಠಾರೆ, ಅರುಣ್ ಗೋವಿಲ್, ಲಾರಾ ದತ್ತಾ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಮೊದಲ ಭಾಗವು ಬಾಕ್ಸ್ ಆಫೀಸ್‌ನಲ್ಲಿ ಭಾರಿ ಯಶಸ್ಸನ್ನು ಕಂಡಿದ್ದು, ವಿಶ್ವಾದ್ಯಂತ 1,500 ಕೋಟಿ ರೂ. ಮೀರಿ ಬಾಕ್ಸ್ ಆಫೀಸ್​ನಲ್ಲಿ ಮುನ್ನುಗ್ಗುತ್ತಿರುವ ರಾಮಾಯಣ ಭಾಗ 1, ಅತಿ ವೇಗವಾಗಿ 2 ಸಾವಿರ ಕೋಟಿ ಕ್ಲಬ್​ ಸೇರುವ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ಈ ಹಿನ್ನೆಲೆಯಲ್ಲಿ, ಎರಡನೇ ಭಾಗದ ಮೇಲಿನ ನಿರೀಕ್ಷೆಗಳು ಇನ್ನಷ್ಟು ಹೆಚ್ಚಾಗಿವೆ. ಚಿತ್ರತಂಡವು ಎರಡನೇ ಭಾಗವನ್ನು 2028ರ ದೀಪಾವಳಿ ಸಮಯಕ್ಕೆ ರಿಲೀಸ್​ ಮಾಡುವ ಪ್ಲ್ಯಾನ್​ ಹಾಕಿಕೊಂಡಿದೆ. ಆದರೆ, ಅಂದುಕೊಂಡಂತೆ ಬಿಡುಗಡೆ ಆಗುತ್ತಾ? ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).