ವೈಭವ್ ಒಬ್ಬನೇ ಸಾಕು... ಕೋಚ್​ ಗೌತಿ, ಬಿಸಿಸಿಐ ಆಯ್ಕೆ ಸಮಿತಿಗೆ ಮಾಜಿ ಕ್ರಿಕೆಟಿಗ ಶ್ರೀಕಾಂತ್ ಕ್ಲಾಸ್ | ​Vaibhav Sooryavanshi

 ​Vaibhav Sooryavanshi
ವೈಭವ್ ಒಬ್ಬನೇ ಸಾಕು... ಕೋಚ್​ ಗೌತಿ, ಬಿಸಿಸಿಐ ಆಯ್ಕೆ ಸಮಿತಿಗೆ ಮಾಜಿ ಕ್ರಿಕೆಟಿಗ ಶ್ರೀಕಾಂತ್ ಕ್ಲಾಸ್ | ​Vaibhav Sooryavanshi
Published on: 

Vaibhav Sooryavanshi: ಟೀಮ್ ಇಂಡಿಯಾದ ಯುವ ಬ್ಯಾಟಿಂಗ್ ಸೆನ್ಸೇಷನ್​, ಕ್ರಿಕೆಟ್ ಲೋಕದಲ್ಲಿ ಸಾಲು ಸಾಲು ಹೊಸ ದಾಖಲೆಗಳನ್ನು ಬರೆಯುತ್ತಿರುವ 15 ವರ್ಷದ ಸ್ಟಾರ್​ ಬ್ಯಾಟರ್​ ವೈಭವ್ ಸೂರ್ಯವಂಶಿ ಹೆಸರು ಒಂದಲ್ಲ ಒಂದು ರೀತಿ ಮುನ್ನೆಲೆಗೆ ಬರುತ್ತಲೇ ಇದೆ. ವೈಭವ್ ಮೈದಾನಕ್ಕೆ ಇಳಿದರೂ ಸುದ್ದಿಯೇ, ಹೊರಗಿದ್ದರೂ ಸುದ್ದಿಯೇ ಎನ್ನುವುದಕ್ಕೆ ಭಾರತದ ಮಾಜಿ ಹಿರಿಯ ಕ್ರಿಕೆಟಿಗ ಕ್ರಿಸ್​ ಶ್ರೀಕಾಂತ್​ ಅವರ ಕಿಡಿನುಡಿಯೇ ಕಾರಣ.

​15 ವರ್ಷಕ್ಕೆ ಸ್ಫೋಟಕ ಬ್ಯಾಟಿಂಗ್ ಸಾಮರ್ಥ್ಯದಿಂದ ಕೋಟ್ಯಾಂತರ ಕ್ರಿಕೆಟ್​ ಅಭಿಮಾನಿಗಳನ್ನು ಸಂಪಾದಿಸಿರುವ ವೈಭವ್​ನಂತಹ ಪ್ರತಿಭೆಗೆ ಬಿಸಿಸಿಐ ಮತ್ತು ಟೀಮ್ ಮ್ಯಾನೇಜ್​ಮೆಂಟ್​ನಿಂದ ಸರಿಯಾದ ಅವಕಾಶಗಳು ಸಿಗುತ್ತಿಲ್ಲ. ಕೇವಲ ಒಂದು ಪಂದ್ಯದಲ್ಲಿ ಆಡಿಸಿ, ನಂತರ ಹಲವು ಪಂದ್ಯಗಳಿಂದ ಹೊರಗಿಡುವ ನಿರ್ಧಾರ ನಿಜಕ್ಕೂ ಒಪ್ಪುವಂತದ್ದಲ್ಲ. ಇದು ಯುವ ಆಟಗಾರನನ್ನು ಪ್ರೋತ್ಸಾಹಿಸುವ ಬದಲು ನಿರುತ್ಸಾಹಕ್ಕೆ ದೂಡಿದಂತೆ ಎಂದು ಶ್ರೀಕಾಂತ್​ ಕಿಡಿಕಾರಿದ್ದಾರೆ.

ಒಂದು ಪಂದ್ಯ ಆಡಿಸಿ, 5 ಪಂದ್ಯ ಕೈಬಿಡಿ...

ವೈಭವ್ ಸೂರ್ಯವಂಶಿಯನ್ನು ಒಂದು ಪಂದ್ಯದಲ್ಲಿ ಆಡಿಸಿ ನಂತರ ಉಳಿದೆಲ್ಲ ಪಂದ್ಯಗಳಿಂದ ಹೊರಗಿಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಶ್ರೀಕಾಂತ್, "ಆಯ್ಕೆಗಾರರು ಮತ್ತು ಟೀಮ್ ಮ್ಯಾನೇಜ್​ಮೆಂಟ್​ ಆತನ ವಿಚಾರದಲ್ಲಿ ನಡೆದುಕೊಳ್ಳುತ್ತಿರುವ ರೀತಿ ಸರಿಯಲ್ಲ. ಅವರು ಆತನನ್ನು ಪ್ರೋತ್ಸಾಹಿಸುವ ಬದಲು ನಿರುತ್ಸಾಹಗೊಳಿಸುತ್ತಿದ್ದಾರೆ. ಇದು ದೊಡ್ಡ ತಪ್ಪು. ಒಂದು ಪಂದ್ಯ ಆಡಿಸಿ ನಂತರ ಐದು ಪಂದ್ಯಗಳಲ್ಲಿ ಅವಕಾಶ ಕೊಡದೆ, ಬೆಂಚ್​ನಲ್ಲಿ ಕೂರಿಸುವುದು ಒಪ್ಪುವಂತದ್ದಲ್ಲ" ಎಂದು ಅಸಮಾಧಾನ ಹೊರಹಾಕಿದ್ದಾರೆ.

ಈ ಹುಡುಗ ಈಗಾಗಲೇ ಸಾಕಷ್ಟು ಅದ್ಭುತ ಪ್ರದರ್ಶನ ನೀಡಿದ್ದಾನೆ. ಹೀಗಾಗಿ, ಆತನಿಗೆ ಎಲ್ಲ ಪಂದ್ಯಗಳಲ್ಲೂ ಆಡುವ ಅವಕಾಶ ಕೊಡಿ. ವೈಭವ್ ಟೆಸ್ಟ್​, ಏಕದಿನ ಎರಡನ್ನೂ ಚೆನ್ನಾಗಿ ಆಡಬಲ್ಲ. ಆತನನ್ನು 20 ಇನಿಂಗ್ಸ್‌ಗಳಲ್ಲಿ ಆಡಿಸಿ. ಒಬ್ಬನೇ ಐದರಿಂದ ಏಳು ಪಂದ್ಯಗಳನ್ನು ಗೆಲ್ಲಿಸಿಕೊಡುತ್ತಾನೆ. ಆ ಸಾಮರ್ಥ್ಯ ಅವನಲ್ಲಿದೆ. ಯುವ ಆಟಗಾರನ ಮೇಲೆ ನಂಬಿಕೆ ಇಟ್ಟು ಆತನಿಗೆ ಸಾಕಷ್ಟು ಪಂದ್ಯಗಳಲ್ಲಿ ಆಡುವ ಅವಕಾಶ ನೀಡಬೇಕು. ಪದೇ ಪದೆ ತಂಡದಿಂದ ಕೈಬಿಡುವ ನಿರ್ಧಾರ ಆತನ ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರಬಹುದು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ.

Also Read
ಸನ್​ ಗ್ರೂಪ್​ ಕಂಪನಿಯ ಉದ್ಯೋಗಿಗಳಿಗೆ ಕಾವ್ಯ ಮಾರನ್​ ದುಬಾರಿ ಗಿಫ್ಟ್​! ಓಪನ್​ ಮಾಡಿದವರಿಗೆ ಕಾದಿತ್ತು ಬಿಗ್ ಸರ್ಪ್ರೈಸ್​​... Kavya Maran
 ​Vaibhav Sooryavanshi

ಟೆಸ್ಟ್​ ಕ್ರಿಕೆಟ್​ಗೂ ಹಾಕಿಕೊಳ್ಳಿ

ವೈಭವ್​ ಟೆಸ್ಟ್​ನಲ್ಲೂ ಯಶಸ್ವಿಯಾದರೆ ವಿಶ್ವದಾದ್ಯಂತ ಟೆಸ್ಟ್ ಕ್ರಿಕೆಟ್‌ಗೆ ಹೊಸ ಆಸಕ್ತಿ ಮೂಡಬಹುದು. ನ್ಯೂಜಿಲೆಂಡ್‌ನಲ್ಲಿ ಆತ ಟಿ20 ಪಂದ್ಯಗಳನ್ನು ಆಡುತ್ತಿದ್ದಾಗ ಆತನ ಬ್ಯಾಟಿಂಗ್ ನೋಡಲು ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ವೈಭವ್​ ಎಲ್ಲಿಗೆ ಹೋದರೂ ಆತನ ಬ್ಯಾಟಿಂಗ್ ನೋಡಲು ಕ್ರಿಕೆಟ್​ ಪ್ರೇಮಿಗಳ ದಂಡು ಹರಿದುಬರುತ್ತಿದೆ. ಈ ಮಾದರಿಯಲ್ಲೂ ಸೂರ್ಯವಂಶಿ ಹೆಚ್ಚು ರನ್​ ಬಾರಿಸಿದರೆ, ಟೆಸ್ಟ್ ಕ್ರಿಕೆಟ್‌ಗೆ ಹೊಸ ಚೈತನ್ಯ ಸಿಗಲಿದೆ ಎಂದಿದ್ದಾರೆ,(ಏಜೆನ್ಸೀಸ್).