ಸಿನಿವಾಣಿ

'ಮೇಡೇ' ಚಿತ್ರದಲ್ಲಿ ಅಜಯ್​ಗೆ ನಾಯಕಿಯಾದ್ರು ರಾಕುಲ್​ ...

manjunathktgns

ಮುಂಬೈ: ಅಮಿತಾಭ್​ ಬಚ್ಚನ್​ ಮತ್ತು ಅಜಯ್​ ದೇವಗನ್​ ಇಬ್ಬರೂ 'ಮೇಡೇ' ಎಂಬ ಚಿತ್ರದಲ್ಲಿ ಜತೆಯಾಗಿ ನಟಿಸಲಿದ್ದಾರೆ ಮತ್ತು ಈ ಚಿತ್ರವನ್ನು ಅಜಯ್​ ದೇವಗನ್​ ಅವರೇ ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ಹೊಸದೇನಲ್ಲ. ಕಳೆದ ಒಂದು ತಿಂಗಳನಿಂದ ಈ ಸುದ್ದಿ ಕೇಳಿ ಬರುತ್ತಲೇ ಇದೆ.

ಈಗ ಆ ಚಿತ್ರ ಶುಕ್ರವಾರ ಹೈದರಾಬಾದ್​ನಲ್ಲಿ ಪ್ರಾರಂಭವಾಗಿದ್ದು, ಚಿತ್ರಕ್ಕೆ ನಾಯಕಿಯಾಗಿ ರಾಕುಲ್​ ಪ್ರೀತ್​ ಸಿಂಗ್​ ಆಯ್ಕೆಯಾಗಿದ್ದಾರೆ. ಚಿತ್ರ ಪ್ರಾರಂಭವಾದ ವಿಷಯವನ್ನು ಸ್ವತಃ ಅಜಯ್​ ದೇವಗನ್​, ಸೋಷಿಯಲ್​ ಮೀಡಿಯಾ ಮೂಲಕ ಘೋಷಿಸಿದ್ದಾರೆ.

ಲಾಕ್​ಡೌನ್​ ಸಮಯದಲ್ಲಿ ಅಜಯ್​ ದೇವಗನ್​ ಅವರು 'ಮೇಡೇ' ಚಿತ್ರದ ಸ್ಕ್ರಿಪ್ಟ್​ ಮಾಡಿಟ್ಟುಕೊಂಡಿದ್ದರಂತೆ. ಈ ಚಿತ್ರದಲ್ಲಿನ ಒಂದು ಪ್ರಮುಖ ಪಾತ್ರಕ್ಕೆ ಅಮಿತಾಭ್​ ಬಚ್ಚನ್​ ಅವರನ್ನು ನಟಿಸುವುದಕ್ಕೆ ಕೇಳಿಕೊಂಡಾಗ, ಅವರು ಸಹ ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ. ಈಗ ರಾಕುಲ್​ ಪ್ರೀತ್​ ಸಿಂಗ್​ ಸಹ ಚಿತ್ರತಂಡ ಸೇರಿಕೊಂಡಿದ್ದಾರೆ.

ವಿಶೇಷವೆಂದರೆ, ಮುಹೂರ್ತದ ದಿನಬೇ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂದು ಅಜಯ್​ ದೇವಗನ್​ ಘೋಷಿಸಿದ್ದಾರೆ. 2022ರ ಏಪ್ರಿಲ್​ 29 ಚಿತ್ರ ಬಿಡುಗಡೆಯಾಗಲಿದೆ ಎಂದು ಘೋಷಿಸಿರುವ ಅಜಯ್​ ದೇವಗನ್​, ಮುಂದಿನ ವರ್ಷ ಚಿತ್ರದ ಚಿತ್ರೀಕರಣವನ್ನು ಮುಗಿಸಲಿದ್ದಾರೆ. ಆ ನಂತರ ಪೋಸ್ಟ್​-ಪ್ರೊಡಕ್ಷನ್​ ಮತ್ತು ಪ್ರಚಾರದ ಕೆಲಸಗಳಿಗೆ ಕೆಲವು ತಿಂಗಳುಗಳನ್ನು ಎತ್ತಿಟ್ಟುಕೊಂಡಿರುವ ಅವರು, 2022ರಲ್ಲಿ ತಮ್ಮ ನಿರ್ದೇಶನದ ಚಿತ್ರವನ್ನು ಬಿಡುಗಡೆ ಮಾಡಲಿದ್ದಾರೆ.

ಅಮಿತಾಭ್​ ಬಚ್ಚನ್​ ಮತ್ತು ಅಜಯ್​ ದೇವಗನ್​ ಜತೆಯಾಗಿ ನಟಿಸುತ್ತಿರುವುದು ಇದು ಮೊದಲೇನಲ್ಲ. ಈಗಾಗಲೇ ಅವರಿಬ್ಬರೂ 'ಮೇಜರ್​ ಸಾಬ್​', 'ಖಾಕಿ', 'ಸತ್ಯಾಗ್ರಹ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದು, ಬಹಳ ವರ್ಷಗಳ ನಂತರ ಈಗ ಮತ್ತೆ ಜೊತೆಯಾಗುತ್ತಿದ್ದಾರೆ.