ಹೈದರಾಬಾದ್: ಕನ್ನಡದ ಜನಪ್ರಿಯ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ಗೆ ಟಾಲಿವುಡ್ನಲ್ಲಿ ಭರ್ಜರಿ ಡಿಮ್ಯಾಂಡ್ ಏರ್ಪಟ್ಟಿದೆ. 'ಕಾಂತಾರ' ಚಿತ್ರದ ಯಶಸ್ಸಿನ ನಂತರ, ಅವರಿಂದ ಸಂಗೀತ ಸಂಯೋಜನೆ ಮಾಡಿಸುವವರ ಸಂಖ್ಯೆ ತೆಲುಗು ಚಿತ್ರರಂಗದಲ್ಲಿ ಹೆಚ್ಚಾಗುತ್ತಿದೆ.
ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಒಂದು ದಶಕದ ಮೇಲಾಗಿದೆ. 'ಶಿಶಿರ' ಚಿತ್ರದ ಮೂಲಕ ಸಂಗೀತ ನಿರ್ದೇಶಕರಾದ ಅವರು ಆರಂಭದ ಕೆಲವು ವರ್ಷಗಳಲ್ಲಿ ಅವಕಾಶಗಳಿಗಾಗಿ ಸ್ವಲ್ಪ ಕಾಯಬೇಕಾಯಿತು. 'ಉಳಿದವರು ಕಂಡಂತೆ' ಯಶಸ್ವಿಯಾದ ನಂತರ ಅಜನೀಶ್ ಕನ್ನಡದಲ್ಲಿ ಬೇಡಿಕೆಯ ಸಂಗೀತ ನಿರ್ದೇಶಕರಾದರು. 'ರಂಗಿತರಂಗ', 'ಕಿರಿಕ್ ಪಾರ್ಟಿ', 'ಬೆಲ್ ಬಾಟಂ', 'ರತ್ನನ್ ಪ್ರಪಂಚ', 'ಕಾಂತಾರ' ಮುಂತಾದ ಹಿಟ್ ಚಿತ್ರಗಳಿಗೆ ಸಂಗೀತ ಸಂಯೋಜಿಸಿದರು. ಕಳೆದ ವರ್ಷ ಬಿಡುಗಡೆಯಾದ 'ಕಾಂತಾರ' ಮತ್ತು 'ವಿಕ್ರಾಂತ್ ರೋಣ' ತೆಲುಗಿಗೆ ಡಬ್ ಆಗಿ, ಟಾಲಿವುಡ್ನಲ್ಲೂ ಬೇಡಿಕೆ ಹೆಚ್ಚಾಗಿದೆ.
ಅಜನೀಶ್ ಲೋಕನಾಥ್ ಈಗಾಗಲೇ 'ವಿರೂಪಾಕ್ಷ' ಎಂಬ ತೆಲುಗು ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಇದಲ್ಲದೆ, ಅಜಯ್ ಭೂಪತಿ ನಿರ್ದೇಶನದ ಹೊಸ ತೆಲುಗು ಚಿತ್ರಕ್ಕೂ ಅವರು ಸಂಗೀತ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಇದಲ್ಲದೆ, ಇನ್ನೊಂದಿಷ್ಟು ತೆಲುಗು ಚಿತ್ರಗಳ ಆಫರ್ ಅಜನೀಶ್ಗೆ ಇದೆಯಂತೆ.
ಅಂದಹಾಗೆ, ಕನ್ನಡದಲ್ಲಿ ಅಜನೀಶ್ ಸಂಗೀತ ಮತ್ತು ಹಿನ್ನೆಲೆ ಸಂಗೀತ ಸಂಯೋಜಿಸಿರುವ 'ರಾಘವೇಂದ್ರ ಸ್ಟೋರ್ಸ್', 'ಹಾಸ್ಟಲ್ ಹುಡುಗರು ಬೇಕಾಗಿದ್ದಾರೆ', 'ವಾಮನ', 'ಕೈವ', 'ಬಘೀರ' ಮುಂತಾದ ಚಿತ್ರಗಳು ಇನ್ನಷ್ಟೇ ಬಿಡುಗಡೆಯಾಗಬೇಕಿವೆ.