ಮುಂಬೈ: ಐಶ್ವರ್ಯಾ ರೈಗೆ ಟ್ರೋಲ್ ಆಗುವುದು ಹೊಸದೇನಲ್ಲ. ಇಷ್ಟು ವರ್ಷಗಳಲ್ಲಿ ಅವರು ಹಲವು ಕಾರಣಗಳಿಗಾಗಿ ಟ್ರೋಲ್ ಆಗಿದ್ದಾರೆ. ಆದರೆ, ಎಷ್ಟೇ ಟ್ರೋಲ್ಗಳಿಗೆ ಒಳಗಾದರೂ, ಅವರು ಅದಕ್ಕೆ ಪ್ರತಿಕ್ರಿಯಿಸಿಲ್ಲ.
ಈಗ ಬಹಳ ದಿನಗಳ ನಂತರ ಐಶ್ವರ್ಯಾ ಮತ್ತೊಮ್ಮೆ ನೆಟ್ಟಿಗರಿಂದ ಟ್ರೋಲ್ಗೊಳಗಾಗಿದ್ದಾರೆ. ಈ ಬಾರಿ ಜನ ಅವರ ಹಿಂದೆ ಬೀಳೋಕೆ ಕಾರಣ ಒಂದು ಮುತ್ತು ಎಂದರೆ ಆಶ್ಚರ್ಯವಾಗಬಹುದು.
ಹೌದು, ಐಶ್ವರ್ಯಾ ಇದೀಗ ಸುದ್ದಿಯಲ್ಲಿರುವುದು ಒಂದು ಮುತ್ತಿಗಾಗಿ. ಬುಧವಾರ, ಐಶ್ವಯಾ ಮಗಳು ಆರಾಧ್ಯಳ 11ನೇ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಮಗಳಿಗೆ ಶುಭ ಕೋರಿದ ಐಶ್ವರ್ಯಾ, ಆಕೆಯ ತುಟಿಗೆ ಮುತ್ತನ್ನಿಟ್ಟಿದ್ದಾರೆ. ಮಗಳಿಗೆ ಮುತ್ತು ಕೊಡುತ್ತಿರುವ ಫೋಟೋವೊಂದನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ಐಶ್ವರ್ಯಾ, 'ಮೈ ಲವ್, ಮೈ ಲೈಫ್, ಐ ಲವ್ ಯೂ, ಮೈ ಆರಾಧ್ಯ' ಎಂದು ಬರೆದುಕೊಂಡಿದ್ದಾರೆ.
ಇದಕ್ಕೆ ಹಲವರು ಐಶ್ವರ್ಯಾ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ. 'ನಿಮ್ಮ ಮಗಳು ಇನ್ನೂ ಚಿಕ್ಕಮಗುವಾಗಿ ಉಳಿದಿಲ್ಲ. ಅವಳು ದೊಡ್ಡವಳಾಗಿದ್ದಾಳೆ' ಎಂದು ನೆನಪಿಸಿದ್ದಾರೆ. 'ಟೀನೇಜ್ ಹುಡುಗಿಗೆ ಹೀಗೆ ತುಟಿಯ ಮೇಲೆ ಮುತ್ತು ಕೊಡುವುದು ಸರಿಯಲ್ಲ' ಎಂದು ಕೆಲವರು ಹೇಳಿದರೆ, ಮಕ್ಕಳಿಗೆ ಹಣೆಗೆ ಅಥವಾ ಗಲ್ಲಕ್ಕೆ ಮುತ್ತು ಕೊಡಬೇಕೇ ಹೊರತು, ಈ ರೀತಿ ತುಟಿಗೆ ಕೊಡುವುದಲ್ಲ. ಅದು ನಮ್ಮ ಸಂಸ್ಕೃತಿಯಲ್ಲ, ಪಾಶ್ಚಿಮಾತ್ಯ ಸಂಸ್ಕೃತಿ ಎಂದು ಹೇಳಿದ್ದಾರೆ.
ಒಂದು ಕಡೆ ಕೆಲವರು ಟ್ರೋಲ್ ಮಾಡಿದರೆ, ಇನ್ನೂ ಕೆಲವರು ಐಶ್ವರ್ಯಾಗೆ ಸಪೋರ್ಟ್ ಮಾಡಿದ್ದಾರೆ. ಇದು ಒಬ್ಬ ತಾಯಿ-ಮಗಳ ಪ್ರೀತಿ ಮತ್ತು ಬಂಧ. ಇದರಲ್ಲಿ ತಪ್ಪು ಹುಡುಕುವುದು ಸರಿಯಲ್ಲ ಎಂದು ಹೇಳಿದ್ದಾರೆ.