ಸಿನಿವಾಣಿ

ಜೈಲಿನಲ್ಲಿ ಡಿ ಗ್ಯಾಂಗ್​​​ಗೆ ರಾಜಾತಿಥ್ಯ! ಫೋಟೋ ಲೀಕ್​ ಆದ ಬೆನ್ನಲ್ಲೇ 7 ಅಧಿಕಾರಿಗಳು ಸಸ್ಪೆಂಡ್​

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್​ಗೆ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ರಾಜ್ಯಾತಿಥ್ಯ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದ ಬೆನ್ನಲ್ಲೇ ಗೃಹ ಇಲಾಖೆಯಿಂದ 7 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ದರ್ಶನ್​ಗೆ ರಾಜ್ಯಾತಿಥ್ಯ ನೀಡಿರುವ ಸಂಬಂಧ ಫೋಟೋ ವೈರಲ್​ ಆದ ಬೆನ್ನಲ್ಲೇ ಎಲ್ಲೆಡೆ ಪೊಲೀಸ್​ ಇಲಾಖೆ ಮತ್ತು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್,​ ಈ ಘಟನೆ ಸಂಬಂಧ 7 ಅಧಿಕಾರಿಗಳನ್ನು ಅಮಾನತು ಮಾಡಿದ್ದೇವೆ. ಮುಂದೆ ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದರು.

ನನಗೆ ನಿನ್ನ ಸುದ್ದಿ ಬಂತು. ಆಗ ಫೋಟೋ ವೈರಲ್ ಆಗ್ತಿತ್ತು. ತಕ್ಷಣ ಡಿಜಿಯವರ ಜೊತೆ ಮಾತನಾಡಿದೆ ಮತ್ತು ಅಧಿಕಾರಿಗಳನ್ನು ಅಲ್ಲಿಗೆ ಕಳಿಸಿಕೊಟ್ಟಿದ್ದೆವು. ಸದ್ಯ ಈ ಪ್ರಕರಣದಲ್ಲಿ ಏಳು ಜನ ಅಧಿಕಾರಿಗಳನ್ನು ಸಸ್ಪೆಂಟ್ ಮಾಡಿದ್ದೇವೆ. ಶರವಣ, ಶರಣಬಸವ, ಪ್ರಭು ಎಸ್, ಎಲ್.ಎಸ್.ತಿಪ್ಪೇಸ್ವಾಮಿ, ಶ್ರೀಕಾಂತ್ ತಳವಾರ್, ಹೆಡ್ ವಾರ್ಡರ್ಸ್ ವೆಂಕಪ್ಪ, ಸಂತೋಷ್ ಕುಮಾರ್ ನರಸಪ್ಪ ಅವರನ್ನು ಅಮಾನತು ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.

ಈ ಘಟನೆಯ ಬಗ್ಗೆ ವರದಿ ಕೇಳಿದ್ದೇನೆ. ಡಿಜಿಯವರು ಅಲ್ಲಿಗೆ ಭೇಟಿ ಕೊಟ್ಟಿದ್ದಾರೆ. ಇಂತಹ ಘಟನೆ ನಡೆಯಬಾರದು. ಯಾರು ಅವಕಾಶ ಕೊಟ್ಟಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಹಿರಿಯ ಅಧಿಕಾರಿಗಳನ್ನು ಅಲ್ಲಿಂದ ಸ್ಥಳಾಂತರ ಮಾಡುತ್ತೇವೆ. ಆ ಜಾಗಕ್ಕೆ ಬೇರೆ ಹಿರಿಯ ಅಧಿಕಾರಿಗಳನ್ನು ಹಾಕುತ್ತೇವೆ. ಆಂತರಿಕ ವರದಿ ಬಂದ ಮೇಲೆ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಬೇರೇ ಎಲ್ಲೇ ಆಗಲಿ ಈ ರೀತಿ ನಡೆಯಬಾರದು. ಇದರಲ್ಲಿ ಯಾರೇ ಭಾಗಿಯಾಗಿರಲಿ ಕ್ರಮ ಜರುಗಿಸ್ತೇವೆ. ಈಗಾಗಲೇ ತನಿಖೆ ಪ್ರಾರಂಭ ಮಾಡಿದ್ದೇವೆ. ಈ ವಿಚಾರದಲ್ಲಿ ಯಾವುದೇ ಮುಲಾಜನ್ನು ನಾವು ಇಟ್ಟುಕೊಳ್ಳುವುದಿಲ್ಲ. ಈ ಪ್ರಕರಣದಿಂದ ಸರ್ಕಾರಕ್ಕೆ ಯಾವುದೇ ಮುಜುಗರ ಆಗಲ್ಲ. ಏಕೆಂದರೆ, ನಾವು ತಕ್ಷಣ ಕ್ರಮ ಕೈಗೊಂಡಿದ್ದೇವೆ ಎಂದರು.

ಸಿಸಿಟಿವಿ ಇದ್ರೂ ಆ ವಸ್ತುಗಳೆಲ್ಲ ಹೇಗೆ ಹೋಯ್ತು ಅಂತಾ ನೋಡ್ತೇವೆ. ಅಧಿಕಾರಿಗಳ ಕಣ್ತಪ್ಪಿಸಿ ಹೇಗೆ ಹೋಯ್ತು ಎಂಬುದನ್ನು ನೋಡಬೇಕು. ಅಧಿಕಾರಿಗಳ ಹೊಣೆಗಾರಿಕೆ ಇದ್ರೆ ಕ್ರಮ ಕೈಗೊಳ್ಳುತ್ತೇವೆ. ನನಗೆ ಯಾವ ಸಚಿವ, ಶಾಸಕರ ಒತ್ತಡವೂ ಇಲ್ಲ. ಯಾರ ಒತ್ತಡಕ್ಕೂ ನಾನು‌ ಮಣಿಯುವುದಿಲ್ಲ. ನಿರ್ದಾಕ್ಷಿಣ್ಯವಾಗಿ ನಾವು ಕ್ರಮ ಕೈಗೊಳ್ತೇವೆ. ಯಾವುದೇ ರೀತಿಯಲ್ಲೂ ಕೇಸ್ ಹಳ್ಳ ಹಿಡಿಯಲು ಬಿಡುವುದಿಲ್ಲ. ಕಾನೂನು ಪ್ರಕಾರವೇ ಕ್ರಮ ತೆಗೆದುಕೊಳ್ತೇವೆ. ಯಾವುದನ್ನೂ ಸುಲಭವಾಗಿ ಬಿಡಲ್ಲ. ವಿಡಿಯೋ ಕಾಲ್​ ಮಾಡಿರುವ ಬಗ್ಗೆಯೂ ತನಿಖೆ ಮಾಡ್ತೇವೆ. ಬೇರೆ ಕಡೆ ಶಿಫ್ಟ್​ ಮಾಡುವ ಕೆಲಸ ಮಾಡುತ್ತೇವೆ. ಇಲ್ಲಿ ಹಿರಿಯ ಅಧಿಕಾರಿಗಳ ತಪ್ಪಿದ್ರೂ ಕ್ರಮ ಕೈಗೊಳ್ತೇವೆ. ಅವರನ್ನೂ ಮುಲಾಜಿಲ್ಲದೆ ಸಸ್ಪೆಂಡ್ ಮಾಡ್ತೇವೆ ಎಂದು ಪರಮೇಶ್ವರ್ ಹೇಳಿದರು.

ಫೋಟೋ ವೈರಲ್​

ಒಂದು ಕೈಯಲ್ಲಿ ಕಾಫಿ ಕಪ್​ ಹಾಗೂ ಇನ್ನೊಂದು ಕೈಯಲ್ಲಿ ಸಿಗರೇಟ್​ ಹಿಡಿದುಕೊಂಡು, ಕುರ್ಚಿಯ ಮೇಲೆ ಆರಾಮಾಗಿ ಕುಳಿತು ರೌಡಿ ವಿಲ್ಸನ್‌ ಗಾರ್ಡನ್‌ ಜತೆ ದರ್ಶನ್​ ಮಾತನಾಡುತ್ತಿರುವ ದೃಶ್ಯ ವೈರಲ್​ ಆಗಿರುವ ಫೋಟೋದಲ್ಲಿದೆ. ಇದರ ಬೆನ್ನಲ್ಲೇ ದರ್ಶನ್​, ರೌಡಿಶೀಟರ್​ ಮಗನ ಜತೆ ಜೈಲಿನಿಂದಲೇ ದರ್ಶನ್​ ವಿಡಿಯೋ ಕಾಲ್​ ಮೂಲಕ ಮಾತನಾಡಿರುವ ವಿಡಿಯೋ ಸಹ ಲೀಕ್​ ಆಗಿದ್ದು, ಎಲ್ಲೆಡೆ ವೈರಲ್​ ಆಗುತ್ತಿದೆ. ದರ್ಶನ್​ ಜೈಲು ಸೇರಿ ಎರಡು ತಿಂಗಳಿಗೂ ಹೆಚ್ಚು ಸಮಯ ಆಗಿದೆ. ಆಗಿನಿಂದಲೂ ಜೈಲಿನಲ್ಲಿ ದರ್ಶನ್​ಗೆ ಎಲ್ಲವೂ ಆರಾಮಾಗಿ ಸಿಗುತ್ತಿದೆ ಎಂಬ ಆರೋಪ ಕೇಳಿಬರುತ್ತಿತ್ತು. ಇದೀಗ ಫೋಟೋ ಹೊರಬಂದ ಬಳಿಕ ಆರೋಪ ನಿಜವಾಗಿದೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಪೊಲೀಸ್​ ವ್ಯವಸ್ಥೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.

ಫೋಟೋ ಲೀಕ್​ ಆಗಿದ್ದು ಹೇಗೆ?

ಇನ್ನು ಫೋಟೋ ಹೇಗೆ ಸೋರಿಕೆ ಆಯಿತು ಅನ್ನೋದನ್ನು ನೋಡುವುದಾದರೆ, ವೇಲು ಎಂಬ ಕೈದಿ ಈ ಫೋಟೋವನ್ನು ಜೈಲಿನಿಂದ ತೆಗೆದು, ತನ್ನ ಪತ್ನಿಗೆ ಕಳುಹಿಸಿದ್ದ. ಆ ಬಳಿಕ ವೈರಲ್​ ಆಗಿದೆ ಎಂದು ಮಾಧ್ಯಮವೊಂದು ತಿಳಿಸಿದೆ. ಒಬ್ಬ ಕೊಲೆ ಆರೋಪಿಗೆ ಇಷ್ಟೊಂದು ರಾಜ ಮರ್ಯಾದೆ ನೀಡುತ್ತಿರುವುದಕ್ಕೆ ಎಲ್ಲೆಡೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಪೊಲೀಸರ ಮೇಲಿನ ನಂಬಿಕೆಯನ್ನೇ ಕಳೆದುಕೊಂಡೆವು ಎಂದು ಟ್ವೀಟ್​ ಮೂಲಕ ನೆಟ್ಟಿಗರು ಅಸಮಾಧಾನ ಹೊರಹಾಕುತ್ತಿದ್ದಾರೆ.

ಏನಿದು ಪ್ರಕರಣ?

ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಮತ್ತು ಗೆಳತಿ ಪವಿತ್ರಾ ಗೌಡ ಅರೆಸ್ಟ್​ ಆಗಿರುವ ಸುದ್ದಿ ರಾಜ್ಯದೆಲ್ಲೆಡೆ ಭಾರಿ ಚರ್ಚೆಯಾಗುತ್ತಿದೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದಕ್ಕೆ ರೇಣುಕಸ್ವಾಮಿಯ ಕೊಲೆ ನಡೆದಿದೆ ಎನ್ನಲಾಗಿದೆ. ಇದರಲ್ಲಿ ದರ್ಶನ್​ ಕೈವಾಡ ಇದೆ. ದರ್ಶನ್​ ಸೂಚನೆ ಕೊಟ್ಟಿದ್ದಕ್ಕೆ ಹಲ್ಲೆ ಮಾಡಿದೆವು ಎಂದು ಬಂಧಿತ ಆರೋಪಿಗಳು ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ದರ್ಶನ್​ರನ್ನು ಬಂಧಿಸಲಾಗಿದೆ. ಫೆಬ್ರವರಿ 27ರಿಂದ ದರ್ಶನ್​ ಗೆಳತಿ ಪವಿತ್ರಾ ಗೌಡಗೆ ರೇಣುಕಸ್ವಾಮಿ ಅಶ್ಲೀಲವಾಗಿ ಮೆಸೇಜ್ ಶುರು ಮಾಡಿದ್ದರು. ಅಕೌಂಟ್‌ ಬ್ಲಾಕ್‌ ಮಾಡಿದ್ದರೂ ಹೊಸ ಅಕೌಂಟ್‌ನಿಂದ ಮತ್ತದೇ ಮಸೇಜ್ ಕಳುಹಿಸುತ್ತಿದ್ದ. ಕಳೆದ ಶುಕ್ರವಾರ ಮರ್ಮಾಂಗದ ಫೋಟೋ ಕಳುಹಿಸಿ ‘ದರ್ಶನ್​ಗಿಂತ ನಾನೇನು ಕಡಿಮೆ ಬಾ’ ಎಂದು ಹೇಳಿದ್ದ. ಈ ರೀತಿಯ ಟಾರ್ಚರ್‌ ಸಹಿಸಿಕೊಳ್ಳಲಾಗದೇ ಪವಿತ್ರಾ ಅವರು ತಮ್ಮ ಮನೆಗೆಲಸದವ ಪವನ್​ಗೆ ಹೇಳಿದ್ದರು. ಈ ವಿಚಾರ ದರ್ಶನ್​ಗೆ ತಿಳಿದಿದೆ. ರೇಣುಕ ಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿ ಕರೆದುಕೊಂಡು ಬಂದು ಶೆಡ್​ನಲ್ಲಿ ಇರಿಸಿಕೊಂಡು ಹಲ್ಲೆ ಮಾಡಿದ್ದ ದರ್ಶನ್ ಮತ್ತು ಗ್ಯಾಂಗ್​, ಹಲ್ಲೆಯಿಂದ ರೇಣುಕಸ್ವಾಮಿ ನಿಧನ ಹೊಂದಿದ ಬಳಿಕ ಆತಂಕಗೊಂಡು, ಶವವನ್ನು ಸಾಗಿಸುವ ದಾರಿ ಹುಡುಕಿದೆ. ಆಗ ಬೇರೆ ಗ್ಯಾಂಗ್ ಒಂದನ್ನು ಕರೆಸಿ ಅವರಿಗೆ ಶವ ಒಪ್ಪಿಸಿ, ಅದನ್ನು ವಿಲೇವಾರಿ ಮಾಡುವಂತೆ ಹೇಳಿ ಅವರಿಗೆ 30 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ಈ ಹಣವನ್ನು ದರ್ಶನ್ ಅವರೇ ನೀಡಿದ್ದಾರೆ ಎನ್ನಲಾಗುತ್ತಿದೆ.

ಹಣ ಪಡೆದ ಮತ್ತೊಂದು ಗ್ಯಾಂಗ್ ರೇಣುಕಾ ಸ್ವಾಮಿಯ ಶವವನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಮನಹಳ್ಳಿ ಮೋರಿಗೆ ಬಿಸಾಡಿ ಹೋಗಿದ್ದಾರೆ. ಶವ ದೊರೆತ ಬಳಿಕ ತಾವೇ ಕೊಲೆ ಮಾಡಿರುವುದಾಗಿ ಹೇಳಿ ಠಾಣೆಗೆ ಒಪ್ಪಿಕೊಂಡಿದ್ದಾರೆ. ಕೊಲೆ ಮಾಡಲು ಹಣಕಾಸಿನ ವಿಚಾರವೇ ಕಾರಣ ಎಂದು ಹೇಳಿದ್ದಾರೆ. ಆದರೆ ಒಬ್ಬೊಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ಮಾಡಿದಾಗ ಅವರ ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಬಳಿಕ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡಿದಾಗ ನಿಜಾಂಶ ಬಯಲಾಗಿದೆ. ಹಣ ಪಡೆದು ಶವ ವಿಲೇವಾರಿ ಜವಾಬ್ದಾರಿ ಹೊತ್ತಿದ್ದ ಗ್ಯಾಂಗ್, ದರ್ಶನ್​ರ ಆಪ್ತನೊಟ್ಟಿಗೆ ಸಂಪರ್ಕದಲ್ಲಿತ್ತಂತೆ. ಶವ ವಿಲೇವಾರಿ ಹಾಗೂ ಕೊಲೆಯ ಆರೋಪ ಹೊರಲೆಂದು ಮುಂಚಿತವಾಗಿಯೇ 30 ಲಕ್ಷ ರೂಪಾಯಿ ಹಣವನ್ನು ದರ್ಶನ್ ಅವರಿಂದ ಈ ಗ್ಯಾಂಗ್ ಪಡೆದಿತ್ತು ಎನ್ನಲಾಗಿದೆ.