ಸಿನಿವಾಣಿ

ಐಶ್ವರ್ಯಾ ರೈ ಜತೆ ಬ್ರೇಕಪ್​! ಇನ್​ಸ್ಟಾ ಪೋಸ್ಟ್​ ಲೈಕ್​ ಮಾಡೋ ಮೂಲಕ ಸುಳಿವು ಕೊಟ್ಟ ಅಭಿಷೇಕ್ ಬಚ್ಚನ್

ನವದೆಹಲಿ: ಬಾಲಿವುಡ್​ ಸ್ಟಾರ್​ ದಂಪತಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನ ಪಡೆಯುವ ಬಗ್ಗೆ ಆಗೊಮ್ಮೆ ಈಗೊಮ್ಮೆ ವದಂತಿಗಳು ಹರಡುತ್ತಲೇ ಇರುತ್ತವೆ. ಇಬ್ಬರ ನಡವಳಿಕೆ ಕೂಡ ಅನುಮಾನ ಹುಟ್ಟಿಸುವಂತಿವೆ. ಇತ್ತೀಚೆಗೆ ನಡೆದ ಕೆಲವು ಬೆಳವಣಿಗೆಗಳು ವದಂತಿ ಬೆಂಕಿಗೆ ತುಪ್ಪವನ್ನು ಸುರಿದಿವೆ.

ಇತ್ತೀಚೆಗಷ್ಟೇ ದೇಶದ ಶ್ರೀಮಂತ ಉದ್ಯಮಿ ಮುಕೇಶ್​ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮದುವೆಯಲ್ಲಿ ಪಾಲ್ಗೊಳ್ಳಲು ಬಚ್ಚನ್ ಕುಟುಂಬ ಹಾಗೂ ಐಶ್ವರ್ಯಾ ಪ್ರತ್ಯೇಕವಾಗಿ ಆಗಮಿಸಿದ್ದರು. ಐಶ್ವರ್ಯಾ ಅವರು ತಮ್ಮ ಮಗಳ ಜೊತೆ ಆಗಮಿಸಿದರೆ, ಅಭಿಷೇಕ್ ಬಚ್ಚನ್ ತಂದೆ-ತಾಯಿ ಜೊತೆ ಬಂದಿದ್ದರು. ಅಭಿಷೇಕ್ ಅವರು ತಮ್ಮ ಪಾಲಕರು ಮತ್ತು ಒಡಹುಟ್ಟಿದವರ ಜತೆ ಮಾತ್ರ ಫೋಟೋಗೆ ಪೋಸ್ ನೀಡಿದ್ದು ಗಂಭೀರ ಚರ್ಚೆಗೆ ಕಾರಣವಾಗಿತ್ತು.

ಇದೀಗ, ಅಭಿಷೇಕ್ ಬಚ್ಚನ್ ಸಾಮಾಜಿಕ ಜಾಲತಾಣದಲ್ಲಿ ವಿಚ್ಛೇದನ ಕುರಿತು ಪೋಸ್ಟ್ ಒಂದಕ್ಕೆ ಲೈಕ್​ ಮಾಡುವ ಮೂಲಕ ಡಿವೋರ್ಸ್​ ವದಂತಿಗೆ ಮತ್ತಷ್ಟು ನೀರೆರೆದಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಲೇಖಕಿ ಹೀನಾ ಖಂಡೇಲ್‌ವಾಲ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. 'ಪ್ರೀತಿಯು ಸುಲಭವಾಗುವುದನ್ನು ನಿಲ್ಲಿಸಿದಾಗ' ಎಂದು ಬರೆದಿರುವ ವಿಚ್ಛೇದನ ಕುರಿತ ಚಿತ್ರವನ್ನು ಖಂಡೇಲ್​ವಾಲ್​ ಪೋಸ್ಟ್​ ಮಾಡಿದ್ದಾರೆ.

ಅಭಿಷೇಕ್​ ಬಚ್ಚನ್​ ಅವರು ವಿಚ್ಛೇದನದ ಪೋಸ್ಟ್ ಅನ್ನು ಲೈಕ್​ ಮಾಡಿದ್ದಾರೆ. ಏಕೆಂದರೆ ಅವರು ಅಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದು ಕೆಲ ನೆಟ್ಟಿಗರು ಭಾವಿಸಿದ್ದಾರೆ. ಐಶ್ವರ್ಯಾ ರೈ ಬಚ್ಚನ್ ಕುಟುಂಬದೊಂದಿಗೆ ವಾಸಿಸುತ್ತಿಲ್ಲ ಎಂಬ ವರದಿಗಳು ಈ ಹಿಂದೆಯೇ ಬಂದಿದ್ದವು. ಅಲ್ಲದೆ, ಅನೇಕ ಕಾರ್ಯಕ್ರಮಗಳಲ್ಲಿ ಐಶ್ವರ್ಯಾ ತಮ್ಮ ಮಗಳೊಂದಿಗೆ ಮಾತ್ರ ಕಾಣಿಸಿಕೊಂಡಿದ್ದು, ವಿಚ್ಛೇದನ ವದಂತಿ ಬಲವಾಗುತ್ತಲೇ ಇದೆ. ಈ ಬಗ್ಗೆ ಸ್ಟಾರ್​ ದಂಪತಿ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್​)