ಸಿನಿವಾಣಿ

ಬಣ್ಣ ಹಚ್ಚಲಿರುವ ಅಮೀರ್ ಖಾನ್​ ಮಗ ... ಯಶ್​ರಾಜ್​ ಫಿಲಂಸ್​ ಚಿತ್ರದ ಮೂಲಕ ಎಂಟ್ರಿ

manjunathktgns

ಬಾಲಿವುಡ್​​ನಲ್ಲಿ ನೆಪೋಟಿಸಂ (ಸ್ವಜನಪಕ್ಷಪಾತ) ಮತ್ತು ಸ್ಟಾರ್ ಮಕ್ಕಳ ಹಾವಳಿ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಲೇ ಇದೆ. ಹೀಗಿರುವಾಗ, ಬಾಲಿವುಡ್​ನ ಮತ್ತೊಬ್ಬ ಸ್ಟಾರ್​ ಮಗ ಹೀರೋ ಆಗಿ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾನೆ.

ಈ ಬಾರಿ ಎಂಟ್ರಿ ಕೊಡುತ್ತಿರುವುದು ಯಾರು ಗೊತ್ತಾ? ಅಮೀರ್​ ಖಾನ್​ ಮಗ ಜುನೈದ್​ ಖಾನ್​. ತಮ್ಮ ಮಗನನ್ನು ಹೀರೋ ಆಗಿ ಪರಿಚಯಿಸುವುದರ ಬಗ್ಗೆ ಅಮೀರ್​ ಕೆಲವು ವರ್ಷಗಳಿಂದ ಹೇಳುತ್ತಲೇ ಇದ್ದು, ಅದೀಗ ನಿಜವಾಗುತ್ತಿದೆ. ಬಾಲಿವುಡ್​ನ ಜನಪ್ರಿಯ ನಿರ್ಮಾಣ ಸಂಸ್ಥೆಯಾದ ಯಶ್​ರಾಜ್​ ಫಿಲಂಸ್​, ಜುನೈದ್​ ಅಭಿನಯದ ಮೊದಲ ಚಿತ್ರವನ್ನು ನಿರ್ಮಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಯಶ್​ರಾಜ್​ ಫಿಲಂಸ್​ನ ಆದಿತ್ಯ ಚೋಪ್ರಾ ಇತ್ತೀಚಿನ ವರ್ಷಗಳಲ್ಲಿ ಹಲವು ಹೊಸಬರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ರಣವೀರ್​ ಸಿಂಗ್​, ಅನುಷ್ಕಾ ಶರ್ಮಾ, ಪರಿಣಿತಿ ಚೋಪ್ರಾ ಮುಂತಾದವರು ಚಿತ್ರರಂಗಕ್ಕೆ ಪರಿಚಿತರಾಗಿದ್ದು ಯಶ್​ರಾಜ್​ ಫಿಲಂಸ್​ ಮೂಲಕವೇ.

ತಮ್ಮ ನಿರ್ಮಾಣದ ಹೊಸ ಚಿತ್ರಕ್ಕೆ ಅವರಿಗೆ ಒಬ್ಬ ಹೊಸ ಹುಡುಗ ಬೇಕಿತ್ತಂತೆ. ಸಾಕಷ್ಟು ಹುಡುಕಾಟದ ನಂತರ ಅಮೀರ್​ ಖಾನ್​ ಮಗ ಸಿಕ್ಕಿದ್ದಾನೆ. ಜುನೈದ್​ಗೆ ಆಡಿಷನ್​ನಲ್ಲಿ ಭಾಗವಹಸಿವುದಕ್ಕೆ ಹೇಳಲಾಗಿದೆ. ಅದರಂತೆ ಜುನೈದ್​, ಆಡಿಷನ್​ನಲ್ಲಿ ಭಾಗವಹಿಸಿ ಪಾಸ್​ ಆದ ನಂತರವಷ್ಟೇ ಅವನನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಇನ್ನು ಚಿತ್ರ ಯಾವಾಗ ಪ್ರಾರಂಭವಾಗುತ್ತದೆ, ಯಾರು ನಿರ್ದೇಶಿಸುತ್ತಾರೆ ಎಂಬುದೆಲ್ಲಾ ಸದ್ಯಕ್ಕೆ ರಹಸ್ಯವಾಗಿ ಇಡಲಾಗಿದೆ. ಸದ್ಯಕ್ಕೆ ಅಭಿನಯದಲ್ಲಿ ಇನ್ನೊಂದಿಷ್ಟು ತರಬೇತಿ ಪಡೆಯುವುದಕ್ಕೆ ಜುನೈದ್​ಗೆ ಹೇಳಲಾಗಿದೆಯಂತೆ. ಅದರ ಪ್ರಕಾರ, ಜುನೈದ್​ ಸಹ ತರಬೇತಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.