ಸಿನಿವಾಣಿ

ಸಂಕ್ರಾಂತಿ ಸ್ಪರ್ಧೆಯಿಂದ ಹಿಂದೆ ಸರಿದ 'ಆದಿಪುರುಷ್​' ... ಜೂನ್​ 16ರಂದು ಬಿಡುಗಡೆ

chetannadiger

ಮುಂಬೈ: ಸಂಕ್ರಾಂತಿಗೆ ಅಷ್ಟೆಲ್ಲಾ ದೊಡ್ಡ ಚಿತ್ರಗಳು ಇರುವುದರಿಂದ, ಪ್ರಭಾಸ್​ ಅಭಿನಯದ 'ಆದಿಪುರುಷ್​' ಚಿತ್ರವನ್ನು ಮುಂದೂಡಲಾಗುತ್ತದೆ ಎಂಬ ಸುದ್ದಿ ಕೆಲವು ದಿನಗಳಿಂದ ಕೇಳಿ ಬಂದಿತ್ತು. ಆದರೆ, 'ಆದಿಪುರುಷ್​' ಚಿತ್ರತಂಡದವರು ಮಾತ್ರ ಚಿತ್ರ ಬಿಡುಗಡೆ ಮುಂದೂಡಿಕೆಯ ಬಗ್ಗೆ ಚಕಾರ ಎತ್ತಿರಲಿಲ್ಲ. ಘೋಷಣೆಯಾದಂತೆಯೇ ಜ.12ರಂದು ಚಿತ್ರ ಬಿಡುಗಡೆ ಆಗಲಿದೆ ಎಂದು ನಂಬಿಸಲಾಗಿತ್ತು. ಈಗ ಕೊನೆಗೂ ಸುದ್ದಿ ನಿಜವಾಗಿದ್ದು, ಚಿತ್ರವನ್ನು ಜೂನ್​ಗೆ ಮುಂದೂಡಲಾಗಿದೆ.

ಹೌದು, 'ಆದಿಪುರುಷ್​' ಚಿತ್ರವು ಇದೀಗ ಸಂಕ್ರಾಂತಿ ರೇಸ್​ನಿಂದ ಹಿಂದೆ ಸರಿದಿದ್ದು, ಜೂನ್​ 16ರಂದು ಬಿಡುಗಡೆಯಾಗಲಿದೆ. ಹಾಗಂತ ಖುದ್ದು ನಿರ್ದೇಶಕ ಓಂ ರೌತ್​ ಅವರೇ ಸೋಷಿಯಲ್​ ಮೀಡಿಯಾದಲ್ಲಿ ಒಂದು ಪೋಸ್ಟ್​ ಹಾಕಿದ್ದಾರೆ.

'ಆದಿಪುರುಷ್​' ತಂಡದವರು ಸಂಕ್ರಾಂತಿ ಹಬ್ಬಕ್ಕೆ ಚಿತ್ರ ಬಿಡುಗಡೆ ಘೋಷಿಸಿದಾಗ, ಯಾರೊಬ್ಬರೂ ರೇಸ್​ನಲ್ಲಿ ಇರಲಿಲ್ಲ. ಕ್ರಮೇಣ ಒಬ್ಬೊಬ್ಬರೇ ಸೇರಿಕೊಂಡರು. ಚಿರಂಜೀವಿ ಅಭಿನಯದ 'ವಾಲ್ಟರ್​ ವೀರಯ್ಯ', ನಂದಮೂರಿ ಬಾಲಕೃಷ್ಣ ಅಭಿನಯದ 'ವೀರ ಸಿಂಹ ರೆಡ್ಡಿ', ವಿಜಯ್​ ಅಭಿನಯದ 'ವಾರಿಸು' ಮತ್ತು ಅಜಿತ್​ ಅಭಿನಯದ 'ತುನಿವು' ಚಿತ್ರಗಳು ಅದೇ ದಿನ ಬಿಡುಗಡೆ ಎಂದು ಘೋಷಣೆಯಾದವು. ಯಾವಾಗ ಇಷ್ಟೊಂದು ಚಿತ್ರಗಳು ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗುತ್ತವೆ ಎಂದು ಸುದ್ದಿಯಾಯಿತೋ, ಆಗ 'ಆದಿಪುರುಷ್​' ಚಿತ್ರತಂಡದವರು ಎಚ್ಚಿತ್ತುಕೊಂಡರು. ಇಂಥ ಸಮಯದಲ್ಲಿ ಚಿತ್ರ ಬಿಡುಗಡೆ ಮಾಡಿದರೆ ಸಮಸ್ಯೆ ತಪ್ಪಿದ್ದಲ್ಲ ಎಂದು ಚಿತ್ರವನ್ನು ಜೂನ್​ 16ಕ್ಕೆ ಮುಂದೂಡಿದ್ದಾರೆ.

ಚಿತ್ರ ಬಿಡುಗಡೆ ಮುಂದೂಡಲ್ಪಟ್ಟಿರುವ ವಿಷಯವನ್ನು ಖಚಿತಪಡಿಸಿರುವ ಓಂ, ''ಆದಿಪುರುಷ್​' ಎನ್ನುವುದು ಬರೀ ಚಿತ್ರವಲ್ಲ. ಶ್ರೀರಾಮನ ಮೇಲೆ ನಮಗಿರುವ ಭಕ್ತಿ ಮತ್ತು ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ಮೇಲೆ ನಮಗಿರುವ ಬದ್ಧತೆ. ನಮ್ಮ ವೀಕ್ಷಕರಿಗೆ ಒಂದೊಳ್ಳೆಯ ಅನುಭವ ನೀಡುವ ಮತ್ತು ತೆರೆಯ ಮೇಲೆ ಅದ್ಭುತ ಸೃಷ್ಟಿಸುವ ನಿಟ್ಟಿನಲ್ಲಿ ನಮ್ಮ ತಂಡಕ್ಕೆ ಇನ್ನಷ್ಟು ಸಮಯದ ಅವಶ್ಯಕತೆ ಇದೆ. ಹಾಗಾಗಿ, ಚಿತ್ರದ ಬಿಡುಗಡೆ ಮುಂದೂಡಲಾಗಿದ್ದು, ಜೂನ್​ 16ರಂದು ಬಿಡುಗಡೆಯಾಗಲಿದೆ' ಎಂದು ಹೇಳಿದ್ದಾರೆ.