ಸಿನಿವಾಣಿ

ಹನುಮಂತನಿಗೆ ಮೀಸಲಿಡುವ ಖಾಲಿ ಸೀಟಿನ ಪಕ್ಕದ ಸೀಟಿಗೆ ದುಬಾರಿ ಬೆಲೆಯಂತೆ! ಆದಿಪುರುಷ್​ ಚಿತ್ರತಂಡ ಹೇಳಿದ್ದಿಷ್ಟು…

ಹೈದರಾಬಾದ್​: ನಟ ಪ್ರಭಾಸ್​ ಅಭಿನಯದ ಆದಿಪುರುಷ್​ ಸಿನಿಮಾದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಕೆಲ ದಿನಗಳ ಹಿಂದಷ್ಟೇ ಚಿತ್ರತಂಡ ತಿರುಪತಿಯಲ್ಲಿ ಅದ್ಧೂರಿಯಾಗಿ ಪ್ರೀ ರಿಲೀಸ್​ ಈವೆಂಟ್​ ಸಹ ಮಾಡಿದೆ. ಈ ವೇಳೆ ಎಲ್ಲೆಡೆ ಜೈ ಶ್ರೀರಾಮ್​ ಘೋಷಣೆ ಮೊಳಗಿತು. ಚಿತ್ರದ ಟ್ರೈಲರ್ ಸಹ​ ಬಿಡುಗಡೆಯಾಗಿದ್ದು ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇದೆಲ್ಲದರ ನಡುವೆ ಆದಿಪುರುಷ್​ ಸಿನಿಮಾಗೆ ಸಂಬಂಧಿಸಿದ ಸುಳ್ಳು ಸುದ್ದಿಯೊಂದು ಎಲ್ಲೆಡೆ ಹರಿದಾಡುತ್ತಿದ್ದು, ಅದಕ್ಕೆ ಚಿತ್ರತಂಡವು ಕೂಡ ಪ್ರತಿಕ್ರಿಯಿಸಿದೆ.

ಹನುಮಂತನಿಗೆ ಸೀಟು ಮೀಸಲು

ಸಿನಿಮಾದ ಟಿಕೆಟ್​ ಬುಕ್ಕಿಂಗ್​ ಈಗಾಗಲೇ ಎಲ್ಲಾ ಕಡೆ ತೆರದಿದ್ದು, ತುಂಬಾ ವೇಗವಾಗಿ ಟಿಕೆಟ್​ ಬುಕ್ಕಿಂಗ್​ ಆಗುತ್ತಿವೆ. ಇದೀಗ ಟಿಕೆಟ್​ ಬೆಲೆ ವಿಚಾರದಲ್ಲಿ ವದಂತಿಯೊಂದು ಹರಿದಾಡುತ್ತಿದೆ. ಇನ್ನೊಂದೆಡೆ ಆದಿಪುರುಷ್​ ಸಿನಿಮಾ ಬಿಡುಗಡೆಯಾಗುವ ಚಿತ್ರಮಂದಿರಗಳಲ್ಲಿ ಒಂದು ಸೀಟ್​ ಅನ್ನು ಹನುಮಂತನಿಗೆ ಮೀಸಲು ಇಡುವಂತೆ ನಿರ್ದೇಶಕ ಓಂ ರಾವರ್​ ಮನವಿ ಮಾಡಿಕೊಂಡಿದ್ದಾರೆ. ಹನುಮಂತನಿಗಾಗಿ ಮೀಸಲಿಡುವ ಸೀಟಿನ ಪಕ್ಕದ ಸೀಟುಗಳ ಟಿಕೆಟ್​ ಬೆಲೆ ದುಬಾರಿ ಆಗಿರಲಿವೆ ಎಂಬ ವದಂತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸುಳ್ಳು ಸುದ್ದಿ

ವದಂತಿ ಬಗ್ಗೆ ಯುವಿ ಕ್ರಿಯೇಷನ್ಸ್, ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ ಹಾಗೂ ಆದಿಪುರುಷ್​ ಚಿತ್ರತಂಡ ಸ್ಪಷ್ಟನೆ ನೀಡಿದ್ದು, ಟಿಕೆಟ್​ ಬೆಲೆ ವಿಚಾರವಾಗಿ ಕೆಲ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಆಂಜನೇಯನಿಗಾಗಿ ಮೀಸಲಿಟ್ಟ ಸೀಟಿನ ಪಕ್ಕದ ಸೀಟುಗಳ ಟಿಕೆಟ್​ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. ಒಂದೇ ಬೆಲೆ ಇರುತ್ತದೆ. ಇಂತಹ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಚಿತ್ರತಂಡ ಹೇಳಿದೆ.

ಸಿನಿಮಾ ವಿಚಾರಕ್ಕೆ ಬಂದರೆ, ಆದಿಪುರುಷ್​ ಸಿನಿಮಾ ರಾಮಾಯಣ ಆಧಾರಿತ ಸಿನಿಮಾ ಆಗಿದೆ. ಪ್ರಭಾಸ್​ ರಾಮನ ಪಾತ್ರಕ್ಕೆ ಬಣ್ಣ ಹಚ್ಚಿದ್ದರೆ, ಕೃತಿ ಸನೋನ್ ಸೀತೆಯಾಗಿ ಕಾಣಿಸಿಕೊಂಡಿದ್ದಾರೆ. ಸೈಫ್​ ಅಲಿ ಖಾನ್​ ರಾವಣ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಈ ಸಿನಿಮಾ ಜೂನ್​ 16ರಂದು ವಿಶ್ವದಾದ್ಯಂತ ತೆರೆಕಾಣಲಿದೆ. (ಏಜೆನ್ಸೀಸ್​)