ಸಿನಿವಾಣಿ

ಕಂಗನಾ ವಿಷಯದಲ್ಲಿ ಉಲ್ಟಾ ಹೊಡೆದ ಅಧ್ಯಯನ್ ...

ಒಂದು ಕಾಲದಲ್ಲಿ ಕಂಗನಾ ರಣಾವತ್ ಅವರನ್ನು ಹಿಗ್ಗಮುಗ್ಗಾ ಬಯ್ಯುತ್ತಿದ್ದ, ಅವರನ್ನು ಮಾಟಗಾತಿ ಎಂದು ಕರೆದಿದ್ದ ಅಧ್ಯಯನ್ ಸುಮನ್, ಇದೀಗ ಉಲ್ಟಾ ಹೊಡೆದಿದ್ದಾರೆ. ಕಂಗನಾ ಸಾಕಷ್ಟು ಕಷ್ಟಪಟ್ಟು ಈ ಸ್ಥಾನಕ್ಕೆ ಬಂದಿದ್ದಾರೆ ಎಂದು ಹೊಗಳಿದ್ದಾರೆ.

ಕೆಲವೇ ಕೆಲವು ವರ್ಷಗಳ ಹಿಂದೆ ಅಧ್ಯಯನ್ ಮತ್ತು ಕಂಗನಾ, ಬಾಲಿವುಡ್‍ನಲ್ಲಿ ಲವ್ವರ್ಸ್ ಎಂದು ಗುರುತಿಸಿಕೊಂಡಿದ್ದರು. ಎಲ್ಲಾ ಕಡೆ ಜತೆಯಾಗಿಯೇ ಓಡಾಡಿಕೊಂಡಿದ್ದರು. ಒಂದು ಹಂತದಲ್ಲಿ ಕಂಗನಾ ಮತ್ತು ಅಧ್ಯಯನ್ ನಡುವೆ ಸ್ನೇಹ ಬಿಟ್ಟುಹೋಯಿತು. ಕಂಗನಾ ಬಾಯಿಗೆ ಬಂದಂತೆ ಮಾತನಾಡುತ್ತಾಳೆ, ಸಿಕ್ಕಿದ್ದರಲ್ಲಿ ಹೊಡೆಯುತ್ತಾಳೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ತನಗೆ ಮಾಟ ಮಾಡಿಸಿದ್ದಾಳೆ ಎಂದು ಅಧ್ಯಯನ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಆ ನಂತರ ಕೆಲವು ವರ್ಷಗಳ ಕಾಲ ಕಂಗನಾ ವಿರುದ್ಧ ಕೆಂಡ ಕಾರುತ್ತಲೇ ಇದ್ದ ಅಧ್ಯಯನ್, ಇದೀಗ ಸಾಫ್ಟ್ ಆಗಿರುವಂತೆ ಕಂಡುಬರುತ್ತಿದೆ. ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ, ಕಂಗನಾ ಬಗ್ಗೆ ಒಂದಿಷ್ಟು ಒಳ್ಳೆಯ ಮಾತುಗಳನ್ನಾಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, `ನಾನು ಯಾವಾಗಲೂ ನನ್ನ ಎಕ್ಸ್ ಗರ್ಲ್‍ಫ್ರೆಂಡ್ ಬಗ್ಗೆ ಮಾತನಾಡುತ್ತೀನಿ ಎಂದು ಹೇಳುತ್ತಾರೆ. ಅದರಿಂದಲೇ ಜನಪ್ರಿಯನಾಗೋದಕ್ಕೆ ಪ್ರಯತ್ನಿಸುತ್ತಿದ್ದೀನಿ ಎಂದೂ ಆರೋಪ ಮಾಡಿದ್ದಾರೆ. ನಿಜ ಹೇಳಬೇಕೆಂದರೆ, ನಾನು ಕಂಗನಾ ಬಗ್ಗೆ ಅದೆಷ್ಟೇ ದೂರಿದರೂ, ಆಕೆಯ ಬಗ್ಗೆ ಗೌರವ ಇದೆ. ಆಕೆ ಸಾಕಷ್ಟು ಕಷ್ಟಪಟ್ಟು ಈ ಹಂತಕ್ಕೆ ಬಂದಿದ್ದಾರೆ. ಚಿತ್ರರಂಗದ ದೊಡ್ಡ ದೊಡ್ಡ ಜನರ ವಿರುದ್ಧ ಫೈಟ್ ಮಾಡುತ್ತಲೇ ತನ್ನದೇ ಆದ ಒಂದು ಅಭಿಮಾನಿಬಳಗವೊಂದನ್ನು ಸೃಷ್ಟಿಸಿಕೊಂಡವರು ಕಂಗನಾ' ಎಂದು ಅಧ್ಯಯನ್ ಹೇಳಿಕೊಂಡಿದ್ದಾರೆ.

ಅಧ್ಯಯನ್ ಮತ್ತು ಕಂಗನಾ ಇಬ್ಬರೂ `ರಾಜ್ 2' ಚಿತ್ರದಲ್ಲಿ ನಟಿಸಿದ್ದರು. ಅವರಿಬ್ಬರ ಮಧ್ಯೆ ಪ್ರೀತಿ ಇತ್ತು. ಆದರೆ, 2009ರಲ್ಲಿ ಕಂಗನಾ ಜಗಳ ಮಾಡಿಕೊಂಡು ಹೊರಬಂದರು. ಆ ನಂತರ ಕಂಗನಾ, ಅಧ್ಯಯನ್ ಬಗ್ಗೆ ಹೆಚ್ಚು ಮಾತನಾಡಿಲ್ಲ. ಆದರೆ, ಅಧ್ಯಯನ್ ಅವಕಾಶ ಸಿಕ್ಕಾಗಲೆಲ್ಲಾ ಕಂಗನಾ ಬಗ್ಗೆ ಏನಾದರೊಂದು ಹೇಳುತ್ತಲೇ ಇರುತ್ತಾರೆ. ತಾನು ಈ ವಿಷಯವನ್ನು ಬಿಟ್ಟು ಬಹಳ ವರ್ಷಗಳಾಯಿತು ಅಂತ ಹೇಳುತ್ತಲೇ ಕಂಗನಾ ಬಗ್ಗೆ ಏನಾದರೊಂದು ವಿಷಯ ಮಾತನಾಡೋದು ವಿಶೇಷ.