ಪ್ರತಿ ಮಹಿಳೆಯ ನೈಜ ಕಥೆಯಿದು ...: ‘ಎಲ್ಲರ ಮನೆಯಲ್ಲಿ ಒಬ್ಬಳು ಪುಟ್ಟಕ್ಕ ಇದ್ದೇ ಇರ್ತಾಳೆ. ನನ್ನ ಪಾಲಿಗಿದು ಒಂದು ವಿಶೇಷ ಪಾತ್ರ. ವೀಕ್ಷಕರಿಗೆ ಪ್ರತಿ ದೃಶ್ಯವೂ ಕನೆಕ್ಟ್ ಆಗುತ್ತಾ ಹೋಗುತ್ತದೆ. ನನ್ನ ಬದುಕು ಹೀಗೆಯೇ ಇದೆಯಲ್ಲ ಎಂದು ಅನಿಸುತ್ತಾ ಸಾಗುತ್ತದೆ. ಮೂರು ಹೆಣ್ಣು ಮಕ್ಕಳನ್ನು ಸಲುಹುತ್ತ, ಮೆಸ್ ನಡೆಸುತ್ತ, ಮಕ್ಕಳ ಕನಸುಗಳನ್ನು ನನಸು ಮಾಡಲು ಆಕೆ ಜೀವ ಸವೆಸುತ್ತಾಳೆ. ನೋವು, ಸಂಕಟ, ಸುಖ, ದುಃಖ, ಸಂತೋಷ ಎಲ್ಲವೂ ಇಲ್ಲಿ ಕಾಣಿಸುತ್ತದೆ. ಗಂಡ ಅನ್ನುವಂಥ ಪುರುಷ ಆಸರೆಯಾಗದೇ ಹೋದಾಗ, ಅವಳೆಷ್ಟು ದಿಟ್ಟತನದಿಂದ ಮುಂದುವರಿಯುತ್ತಾಳೆ, ಮಕ್ಕಳನ್ನು ಹೇಗೆ ರೂಪಿಸುತ್ತಾಳೆ, ಅವರ ಮೂಲಕ ಕನಸನ್ನು ಹೇಗೆ ಈಡೇರಿಸುತ್ತಾಳೆ? ಹೀಗೆ ಇಡೀ ಧಾರಾವಾಹಿ ಎಲ್ಲರ ಮನಸಿಗೆ ಹತ್ತಿರವಾಗುತ್ತಾ ಹೋಗುತ್ತದೆ’ ಎಂದು ಹೇಳಿಕೊಳ್ಳುತ್ತಾರೆ ಉಮಾಶ್ರೀ.
ನಿರ್ದೇಶಕ ಆರೂರು ಜಗದೀಶ್, ‘ಪುಟ್ಟಕ್ಕನ ಮಕ್ಕಳು’ ಕಥೆ ಮಾಡಿದಾಗ, ಅವರ ಮೊದಲ ಆಯ್ಕೆ ಉಮಾಶ್ರೀ ಅವರೇ ಆಗಿತ್ತು. ಅದರಂತೆ ಕೊನೆಗೂ ಅವರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ‘ಕಥೆ ಕೇಳಿದ ತಕ್ಷಣ ಅವರು ಒಪ್ಪಿಕೊಳ್ಳಲಿಲ್ಲ. ಒಂದಷ್ಟು ಕಸರತ್ತು ಮಾಡಬೇಕಾಯಿತು. ಅವರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡುತ್ತಿರುತ್ತಾರೆ. ಆ ನಡುವೆ ನಮಗೆ ಟೈಮ್ ಕೊಡುತ್ತಿದ್ದಾರೆ. ಆ ಸಮಯವನ್ನು ನಾವು ಬಳಸಿಕೊಳ್ಳಲು ಆಗುತ್ತಿಲ್ಲವೇನೋ ಅನಿಸುತ್ತಿದೆ. ಅಮ್ಮನ ಬೆಂಬಲ ಇದ್ದರೇನೇ ಮಕ್ಕಳು ಬೆಳಿಯೋದು. ಅದೇ ರೀತಿ ಸಹಕಾರ ನೀಡುತ್ತಿದ್ದಾರೆ. ಈಗಾಗಲೇ ಒಂದಷ್ಟು ಏಪಿಸೋಡ್ಗಳ ಚಿತ್ರೀಕರಣವಾಗಿದೆ. ಇದೀಗ ಪ್ರಸಾರ ಕ್ಷಣಕ್ಕೂ ಬಂದಿದ್ದೇವೆ. ಕಾಯುತ್ತಿದ್ದೇವೆ’ ಎಂಬುದು ನಿರ್ದೇಶಕರ ಮಾತು.
ಮಂಡ್ಯ ಜಿಲ್ಲೆ ದೇವಿಪುರ ಎನ್ನುವ ಊರಿನಲ್ಲಿ ನಡೆಯುವ ಕತೆ ಇದು. ಪುಟ್ಟಕ್ಕನಿಗೆ ಜೀವನಾಧಾರ ಆಕೆ ನಡೆಸುವ ಮೆಸ್. ಗಂಡು ಮಗುವಿಗೆ ಜನ್ಮ ನೀಡಲಿಲ್ಲ ಎಂದು ಆಕೆಯ ಗಂಡ ಪುಟ್ಟಕ್ಕನನ್ನು ನಿರ್ಲಕ್ಷಿಸಿ ಬೇರೆ ಮದುವೆಯಾಗಿರುತ್ತಾನೆ. ಸಹನಾ, ಸ್ನೇಹಾ ಮತ್ತು ಸುಮಾ ಎಂಬ ಮೂವರು ಜಾಣ ಹೆಣ್ಣುಮಕ್ಕಳು ಪುಟ್ಟಕ್ಕನಿಗೆ. ಈ ಮಕ್ಕಳ ಬದುಕನ್ನು ಪುಟ್ಟಕ್ಕ ಹೇಗೆ ರೂಪಿಸುತ್ತಾಳೆ ಎನ್ನುವುದೇ ಕಥೆ. ಉಮಾಶ್ರೀ ಅವರ ಜತೆಗೆ ಮಂಜು ಭಾಷಿಣಿ, ರಮೇಶ್ ಪಂಡಿತ್ ಸೇರಿ ಹಲವರು ಪ್ರಮುಖ ಪಾತ್ರದಲ್ಲಿದ್ದಾರೆ. ‘ಜೊತೆ ಜೊತೆಯಲಿ’ ಖ್ಯಾತಿಯ ಆರೂರು ಜಗದೀಶ್ ಈ ಧಾರಾವಾಹಿಯನ್ನು ನಿರ್ದೇಶಿಸಿದ್ದು, ಜೆಎಸ್ ಪೊ›ಡಕ್ಷನ್ಸ್ ನಿರ್ವಣದ ಹೊಣೆ ಹೊತ್ತಿದೆ. ಸೋಮವಾರದಿಂದ ರಾತ್ರಿ 7.30ಕ್ಕೆ ಜೀ ಕನ್ನಡದಲ್ಲಿ ಈ ಧಾರಾವಾಹಿ ಪ್ರಸಾರವಾಗಲಿದೆ.
ಈ ಹಿಂದೆ ಜೀ ಕನ್ನಡದಲ್ಲಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ ಪ್ರೋಮೋ ಬಿಡುಗಡೆ ಆದಾಗ, ಇದು ಉಮಾಶ್ರೀ ಅವರ ನೈಜ ಬದುಕಿನ ಅನಾವರಣ ಎಂದೇ ಹೇಳಲಾಗಿತ್ತು. ಆದರೆ, ಅದನ್ನು ಸಾರಾಸಗಟಾಗಿ ಅಲ್ಲಗೆಳೆಯುತ್ತಾರವರು. ‘ಇದು ನನ್ನ ಜೀವನದ ಕಥೆಯಲ್ಲ. ನಾನು ಸೆಲೆಬ್ರಿಟಿ ಬದುಕಿನಲ್ಲಿ್ಲುವುದರಿಂದ ನೋಡುಗರಿಗೆ ಸಹಜವಾಗಿ ಹಾಗೆ ಅನ್ನಿಸುವುದು ಸಹಜ. ಇದು ನನ್ನ ಬದುಕಲ್ಲ. ನನ್ನ ಬದುಕಿನಂತೆ ಬೇರೆೆಯವರ ಬದುಕೂ ಇರುತ್ತದೆ. ಬೇರೆಯವರಂತೆ ನನ್ನ ಬದುಕು ಇರಬಹುದು. ನೋಡುಗರಿಗೆ ಹಾಗೇ ಕಾಣಿಸುತ್ತದೆ. ಒಂದು ಸಣ್ಣ ಝುಲಕ್ ಕಾಣಿಸಬಹುದು. ಆದರೆ, ಇದು ಪುಟ್ಟಕ್ಕನ ಬದುಕೇ ಹೊರತು, ನನ್ನದಲ್ಲ!’ ಎಂದು ಸ್ಪಷ್ಟೀಕರಣ ನೀಡುತ್ತಾರೆ.
ಒಂದು ಸಣ್ಣ ಗ್ಯಾಪ್ನ ನಂತರ ಉಮಾಶ್ರೀ ಮತ್ತೊಮ್ಮೆ ಅಭಿನಯದಲ್ಲಿ ಸಕ್ರಿಯರಾಗಿದ್ದಾರೆ. ‘‘ರತ್ನನ್ ಪ್ರಪಂಚ’ ಚಿತ್ರಕ್ಕೆ ಅದ್ಬುತವಾದ ಪ್ರತಿಕ್ರಿಯೆ ಸಿಕ್ಕಿದೆ. ಶಿವರಾಜಕುಮಾರ್ ಅಭಿನಯದ ‘ವೇದ’ ಚಿತ್ರದಲ್ಲಿ ನಟಿಸುತ್ತಿದ್ದೇನೆ. ‘ಕ್ರಾಂತಿ’ ಶೂಟಿಂಗ್ ಶುರುವಾಗಬೇಕಿದೆ. ಅದರ ಜತೆಗೆ ‘ಪುಟ್ಟಕ್ಕನ ಮಕ್ಕಳು’ ಸಹ ಶುರುವಾಗಿದೆ. ಇನ್ನು ಮುಂದೆ ಬಣ್ಣದ ಬದುಕಿಗೂ ಸಮಯ ಕೊಡುತ್ತೇನೆ. ಗ್ಯಾಪ್ ಆಯಿತು. ಲಾಸ್ ಆಯಿತು ಅಂತೇನಿಲ್ಲ’ ಎನ್ನುತ್ತಾರೆ ಉಮಾಶ್ರೀ.