Actress Soundarya : ನಟಿ ಸೌಂದರ್ಯ ಸಾವಿನ ಪ್ರಕರಣದಲ್ಲಿ ಕಳೆದ ಕೆಲವು ದಿನಗಳಿಂದ ಟಾಲಿವುಡ್ ನಟ ಮೋಹನ್ ಬಾಬು ಅವರ ಹೆಸರು ಕೇಳಿ ಬರುತ್ತಿದೆ. ಸೌಂದರ್ಯ ಅವರ ಸಾವು ಅಪಘಾತದಿಂದ ಆಗಿದ್ದಲ್ಲ, ಅವರನ್ನು ಪ್ಲಾನ್ ಮಾಡಿ ಕೊಲೆ ಮಾಡಲಾಗಿದೆ ಎಂದು ಖಮ್ಮಂ ಜಿಲ್ಲೆಯ ವ್ಯಕ್ತಿಯೊಬ್ಬರು ಆರೋಪಿಸಿದ್ದು, ದೂರು ಸಹ ನೀಡಿದ್ದಾರೆ.
ಪ್ರಸ್ತುತ ದಾಖಲಾಗಿರುವ ದೂರಿನಲ್ಲಿ ಆಸ್ತಿ ವಿವಾದಕ್ಕೆ ನಡೆದ ಹತ್ಯೆ ಎಂದು ಉಲ್ಲೇಖಿಸಲಾಗಿದೆ. ಶಂಶಾಬಾದ್‌ನ ಜಲಪಲ್ಲಿ ಗ್ರಾಮದಲ್ಲಿ ಆರು ಎಕರೆ ಭೂಮಿಯನ್ನು ಮೋಹನ್ ಬಾಬುಗೆ ಕೊಡಲು ಸೌಂದರ್ಯ ಮತ್ತು ಅವರ ಸಹೋದರ ಅಮರನಾಥ್ ನಿರಾಕರಿಸಿದ್ದರು. ಇದು ಅವರಿಬ್ಬರ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು. ಇದೇ ಆಕೆಯ ಕೊಲೆಗೆ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೂರುದಾರರನ್ನು ಚಿಟ್ಟಿಮಲ್ಲು ಎಂದು ಗುರುತಿಸಲಾಗಿದ್ದು, ಖಮ್ಮಂ ಎಸಿಪಿ ಮತ್ತು ಖಮ್ಮಂ ಜಿಲ್ಲಾಧಿಕಾರಿ ಇಬ್ಬರಿಗೂ ದೂರನ್ನು ಸಲ್ಲಿಸಿದ್ದಾರೆ.
ಯಾವಾಗ ದೂರು ದಾಖಲಾಗಿ ಭಾರಿ ಸುದ್ದಿಯಾಯಿತೋ ಸೌಂದರ್ಯ ಪತಿ ಜಿ.ಎಸ್. ರಘು ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಮೋಹನ್ ಬಾಬು ಪರ ಬ್ಯಾಟ್ ಬೀಸಿದ್ದು, ಸೌಂದರ್ಯ ಸಾವಿಗೂ ಮೋಹನ್ ಬಾಬುಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ನನಗೆ ತಿಳಿದ ಮಟ್ಟಿಗೆ, ಮೋಹನ್ ಬಾಬು ಮತ್ತು ನಾನು ಯಾವುದೇ ಆಸ್ತಿ ವ್ಯವಹಾರಗಳನ್ನು ಹೊಂದಿಲ್ಲ. ಸೌಂದರ್ಯ ಅವರ ಮರಣದ ನಂತರವೂ, ನಾನು ಮೋಹನ್ ಬಾಬು ಅವರೊಂದಿಗೆ ಸುಮಾರು 25 ವರ್ಷಗಳಿಗೂ ಹೆಚ್ಚು ಕಾಲ ಉತ್ತಮ ಸ್ನೇಹವನ್ನು ಹೊಂದಿದ್ದೇನೆ. ನನ್ನ ಹೆಂಡತಿ, ಅತ್ತೆ ಮತ್ತು ಭಾವ ಅವರು ಕೂಡ ಮೋಹನ್ ಬಾಬು ಜತೆ ಉತ್ತಮ ಬಾಂಧವ್ಯ ಹೊಂದಿದ್ದರು. ಸದ್ಯಕ್ಕೆ ನಾನು ಅವರ ಬೆಂಬಲಕ್ಕೆ ನಿಲ್ಲುತ್ತೇನೆ ಎಂದು ರಘು ಹೇಳಿದ್ದಾರೆ.
ಮಾತು ಮುಂದುವರಿಸಿರುವ ರಘು ನನ್ನ ಪತ್ನಿ ಸೌಂದರ್ಯ ಸಾವಿನ ವಿಷಯದಲ್ಲಿ ಸತ್ಯವನ್ನು ಹೇಳಲು ಬಯಸಿದ್ದೇನೆ. ಮೋಹನ್ ಬಾಬು ಅವರ ಕುಟುಂಬದೊಂದಿಗೆ ನಮಗೆ ಯಾವುದೇ ಆಸ್ತಿ ವ್ಯವಹಾರಗಳಿಲ್ಲ. ಖಂಡಿತವಾಗಿಯೂ ಇದೆಲ್ಲವೂ ಆಧಾರರಹಿತ ಸುದ್ದಿಗಳು. ಆದ್ದರಿಂದ ದಯವಿಟ್ಟು ಅಂತಹ ಸುದ್ದಿಗಳನ್ನು ಪ್ರಕಟಿಸಬೇಡಿ ಎಂದು ರಘು ಮನವಿ ಮಾಡಿದ್ದಾರೆ.
ಅಂದಹಾಗೆ ಸೌಂದರ್ಯ ಕನ್ನಡ, ತಮಿಳು, ತೆಲುಗು ಚಿತ್ರರಂಗದಲ್ಲಿ ಮಿಂಚಿ, 31ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ದಕ್ಷಿಣ ಭಾರತದ ಸ್ಟಾರ್ ನಟಿ. ಕನ್ನಡದಲ್ಲಿ ‘ಸಿಪಾಯಿ’, ‘ಆಪ್ತಮಿತ್ರ’ ಚಿತ್ರಗಳಲ್ಲಿ ನಟಿಸಿ, ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಸೌಂದರ್ಯ, ತಮ್ಮ ಹೆಸರಿಗೆ ತಕ್ಕಂತೆ ಬದುಕಿ ಬಾಳಿದವರು. ಚಿತ್ರೋದ್ಯಮದ ಉತ್ತುಂಗದಲ್ಲಿದ್ದ ನಟಿ 2004ರಲ್ಲಿ ಚುನಾವಣಾ ಪ್ರಚಾರಕ್ಕೆಂದು ಪ್ರಯಾಣಿಸುವಾಗ ಹೆಲಿಕಾಪ್ಟರ್ ಪತನಗೊಂಡು ದುರಂತ ಅಂತ್ಯ ಕಂಡರು. ಈ ವೇಳೆ ನಟಿಯ ಜತೆ ಪ್ರಯಾಣಿಸುತ್ತಿದ್ದ ಆಕೆಯ ಸಹೋದರ ಕೂಡ ದುರಂತದಲ್ಲಿ ಸಾವಿಗೀಡಾದರು. ಇದೀಗ ಮತ್ತೆ ಅವರ ಸಾವಿನ ಸುದ್ದಿ ಚರ್ಚೆಯಾಗುತ್ತಿದೆ. (ಏಜೆನ್ಸೀಸ್)