ಸಿನಿವಾಣಿ

ರಮ್ಯಾ ಹೊಸ ಚಿತ್ರ ಘೋಷಣೆ: ‘ಸ್ವಾತಿ ಮುತ್ತಿನ ಮಳೆಹನಿಯೇ’ ಚಿತ್ರದಲ್ಲಿ ರಮ್ಯಾ, ರಾಜ್ ಬಿ. ಶೆಟ್ಟಿ

ಬೆಂಗಳೂರು: ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ನಟಿ ರಮ್ಯಾ ತಮ್ಮ ನಿರ್ಮಾಣ ಸಂಸ್ಥೆ ‘ಆಪಲ್ ಬಾಕ್ಸ್ ಸ್ಟುಡಿಯೋಸ್’ಅನ್ನು ಲಾಂಚ್ ಮಾಡಿದ್ದರು. ಈ ಬ್ಯಾನರ್​ನಲ್ಲಿ ಎರಡು ಚಿತ್ರಗಳನ್ನು ನಿರ್ಮಾಣ ಮಾಡುವುದಾಗಿ ತಿಳಿಸಿದ್ದರು. ಜತೆಗೆ ಓಟಿಟಿಗೂ ಸಿನಿಮಾ ಹಾಗೂ ವೆಬ್​ಸರಣಿಗಳನ್ನು ನಿರ್ವಿುಸುವ ಯೋಜನೆಯನ್ನು ಹಂಚಿಕೊಂಡಿದ್ದರು. ಅದಾಗಿ ಒಂದು ತಿಂಗಳ ಬಳಿಕ ರಮ್ಯಾ ಮೊದಲ ಸಿನಿಮಾ ಘೋಷಣೆ ಮಾಡಿದ್ದಾರೆ. ನಿನ್ನೆ ವಿಜಯದಶಮಿ ಹಬ್ಬದ ಸುಸಂದರ್ಭದಲ್ಲಿ ತಮ್ಮ ಚೊಚ್ಚಲ ನಿರ್ವಣದ ಚಿತ್ರದ ಶೀರ್ಷಿಕೆ ‘ಸ್ವಾತಿಮುತ್ತಿನ ಮಳೆಹನಿಯೇ’ಯನ್ನು ಘೋಷಿಸಿದ್ದಾರೆ. ಚಿತ್ರಕ್ಕೆ ರಾಜ್ ಬಿ. ಶೆಟ್ಟಿ ನಿರ್ದೇಶನವಿರಲಿದ್ದು, ನಾಯಕನಾಗಿಯೂ ನಟಿಸಲಿದ್ದಾರೆ. ವಿಶೇಷವೆಂದರೆ, ರಮ್ಯಾ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದು, ನಟಿಯಾಗಿಯೂ ಕಮ್್ಯಾಕ್ ಮಾಡುತ್ತಿದ್ದಾರೆ.

2016ರಲ್ಲಿ ಬಿಡುಗಡೆಯಾದ ‘ನಾಗರಹಾವು’ ಚಿತ್ರದ ಬಳಿಕ ರಮ್ಯಾ ಮತ್ತೆ ತೆರೆಯ ಮೇಲೆ ಕಾಣಿಸಿಕೊಂಡಿರಲಿಲ್ಲ. ರಾಜಕೀಯದಲ್ಲಿ ಸಕ್ರಿಯರಾಗಿದ್ದ ಅವರು, ಕೆಲವು ವರ್ಷಗಳಿಂದೀಚೆಗೆ ಅಲ್ಲೂ ಹೆಚ್ಚು ಕಾಣಿಸಿಕೊಂಡಿಲ್ಲ. ಇತ್ತೀಚೆಗೆ ಕೆಲವು ಸಿನಿಮಾಗಳ ಶೂಟಿಂಗ್ ಲೊಕೇಷನ್​ಗೆ ಭೇಟಿ ಕೊಟ್ಟಿದ್ದ ಅವರು, ಮತ್ತೆ ಎರಡನೇ ಇನ್ನಿಂಗ್ಸ್ ಪ್ರಾರಂಭಿಸುತ್ತಾರಾ ಎಂಬ ಕುತೂಹಲ ಮೂಡಿಸಿದ್ದರು. ನಂತರ ಕೆಲವು ಚಿತ್ರಗಳ ಫಸ್ಟ್ ಲುಕ್, ಟೀಸರ್ ಬಿಡುಗಡೆ ಮಾಡಿಕೊಟ್ಟಿದ್ದ ರಮ್ಯಾ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದ್ದರು. ರಾಜ್ ಬಿ. ಶೆಟ್ಟಿ ಕಥೆಯಿಂದ ಖುಷಿಯಾಗಿ ಈ ಚಿತ್ರವನ್ನು ನಿರ್ವಿುಸುತ್ತಿರುವುದಾಗಿ ರಮ್ಯಾ ಹೇಳಿಕೊಂಡಿದ್ದಾರೆ. ಸದ್ಯ ಚಿತ್ರ ಪ್ರಿ-ಪ್ರೊಡಕ್ಷನ್ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಚಿತ್ರೀಕರಣ ಪ್ರಾರಂಭವಾಗಲಿದೆ. ‘ಗರುಡ ಗಮನ ವೃಷಭ ವಾಹನ’ ಚಿತ್ರದ ಛಾಯಾಗ್ರಾಹಕ ಪ್ರವೀಣ್ ಶ್ರಿಯಾನ್ ಮತ್ತು ಸಂಗೀತ ನಿರ್ದೇಶಕ ಮಿಥುನ್ ಮುಕುಂದನ್ ಈ ಚಿತ್ರದಲ್ಲೂ ರಾಜ್ ಜತೆಯಾಗಿದ್ದಾರೆ.

ಶೀರ್ಷಿಕೆಯಾಯಿತು ಹಾಡಿನ ಸಾಲು: ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ‘ಬಣ್ಣದ ಗೆಜ್ಜೆ’ ಚಿತ್ರದ ಸೂಪರ್ ಹಿಟ್ ಹಾಡು ಈ ‘ಸ್ವಾತಿ ಮುತ್ತಿನ ಮಳೆ ಹನಿಯೇ ...’. ಹಂಸಲೇಖ ಸಂಗೀತ ನಿರ್ದೇಶನದಲ್ಲಿ, ಎಸ್.ಪಿ. ಬಾಲಸುಬ್ರಮಣ್ಯಂ ಮತ್ತು ಎಸ್. ಜಾನಕಿ ಕಂಠಸಿರಿಯಲ್ಲಿ ಮೂಡಿಬಂದಿರುವ ಹಾಡು, ಕನ್ನಡ ಚಿತ್ರರಂಗದ ಸಾರ್ವಕಾಲಿಕ ಜನಪ್ರಿಯ ಹಾಡುಗಳಲ್ಲೊಂದು. ಅದರ ಸಾಲು ಈಗ ಚಿತ್ರದ ಶೀರ್ಷಿಕೆಯಾಗಿದೆ.