ಸಿನಿವಾಣಿ

ಖ್ಯಾತ ನಟರ ಜತೆ ಅಫೇರ್! ಶ್ರೀರಾಮಚಂದ್ರನ ಬೆಡಗಿ ಮೋಹಿನಿ ಬಿಚ್ಚಿಟ್ಟ ಅಸಲಿ ಸಂಗತಿ​ ಇದು…

ರಮೇಶ್​ ಕುಮಾರ್​​ ಬಿ ಎಡಮೋಳೆ

ನವದೆಹಲಿ: ಕ್ರೇಜಿಸ್ಟಾರ್​ ರವಿಚಂದ್ರನ್​ ಅಭಿನಯದ ಶ್ರೀರಾಮಚಂದ್ರ ಸಿನಿಮಾ ಬಗ್ಗೆ ಕೇಳಿದರೆ ಮೊದಲು ನೆನಪಾಗುವುದೇ "ಸುಂದರಿ ಸುಂದರಿ ಸುರ ಸುಂದರಿ" ಹಾಡು. ಎಸ್​.ಪಿ. ಬಾಲಸುಬ್ರಹ್ಮಣ್ಯಂ ಅವರು ವಿಭಿನ್ನವಾಗಿ ಹಾಡಿದ ಈ ಹಾಡು ಇಂದಿಗೂ ಎಲ್ಲರ ಬಾಯಲ್ಲಿ ಗುನುಗುತ್ತಿರುತ್ತದೆ. ಈ ಹಾಡಲ್ಲಿ ರವಿಚಂದ್ರನ್​ ಜತೆ ಹೆಜ್ಜೆ ಹಾಕಿದ ನಟಿ ಮೋಹಿನಿ ಅವರು ಕನ್ನಡಿಗರಿಗೂ ಚಿರಪರಿಚಿತ.

ಶ್ರೀರಾಮಚಂದ್ರ ಮಾತ್ರವಲ್ಲ, ಕಲ್ಯಾಣ ಮಂಟಪ, ಜ್ವಾಲಾ, ಸಿಡಿದೆದ್ದ ಪಾಂಡವರು, ರೌಡಿ, ಲಾಲಿ ಮತ್ತು ನಿಶ್ಯಬ್ದ ಸೇರಿದಂತೆ ಕೆಲವೇ ಸಿನಿಮಾಗಳಲ್ಲಿ ನಟಿಸಿದರೂ ಕೂಡ ತಮ್ಮ ನಟನೆಯ ಮೂಲಕ ಮೋಹಿನಿ ಅವರು ಕನ್ನಡಿಗರ ಮನದಲ್ಲಿ ಮನೆ ಮಾಡಿದ್ದಾರೆ. ಚೆನ್ನೈನಲ್ಲಿ ಜನಿಸಿದ ಮೋಹಿನಿ 90ರ ದಶಕದಲ್ಲಿ ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸುವ ಮೂಲಕ ಬಹುಭಾಷ ನಟಿ ಎನಿಸಿಕೊಂಡರು.

ಸಿನಿಮಾ ವೃತ್ತಿ ಜೀವನದ ಉತ್ತುಂಗದಲ್ಲಿರುವಾಗಲೇ 1999ರಲ್ಲಿ ಭರತ್​ ಎಂಬುವರನ್ನು ವರಿಸಿದ ಮೋಹಿನಿ, ಕಾಲಾನಂತರದಲ್ಲಿ ಸಿನಿಮಾಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿದರು. 2011ರಲ್ಲಿ ಕೊನೆಯದಾಗಿ ಕಲೆಕ್ಟರ್​ ಹೆಸರಿನ ಮಲಯಾಳಂ ಸಿನಿಮಾದಲ್ಲಿ ನಟಿಸಿ, ಸಿನಿಮಾದಿಂದ ಅಂತರ ಕಾಯ್ದುಕೊಂಡರು. ಮೋಹಿನಿ ಅವರಿಗೆ ಇದೀಗ ಇಬ್ಬರು ಗಂಡು ಮಕ್ಕಳಿದ್ದು, ತಮ್ಮ ಸಂಪೂರ್ಣ ಗಮನವನ್ನು ಕುಟುಂಬ ಮೇಲೆ ಹರಿಸಿದ್ದಾರೆ.

ನಟಿಯರು ಅಂದ ಮೇಲೆ ಗಾಸಿಪ್​ ಇದ್ದೇ ಇರುತ್ತದೆ. ಇದಕ್ಕೆ ಮೋಹಿನಿ ಅವರು ಸಹ ಹೊರತಾಗಿಲ್ಲ. ಮೋಹಿನಿ ಅವರ ಹಳೆಯ ಸಂದರ್ಶನದ ವಿಡಿಯೋ ಇದೀಗ ಮತ್ತೆ ವೈರಲ್​ ಆಗುತ್ತಿದೆ. ಸಂದರ್ಶನದಲ್ಲಿ ತಮಗೆ ಎದುರಾದ ಗಾಸಿಪ್​ ಪ್ರಶ್ನೆಗೆ ಮೋಹಿನಿ ಉತ್ತರಿಸಿದ್ದಾರೆ. ನನ್ನ ಮತ್ತು ಅರವಿಂದ್​ ಸ್ವಾಮಿ ನಡುವೆ ಗಾಸಿಪ್​ ಶುರು ಮಾಡಿದ್ದರು. ಅದೇ ರೀತಿ ಅಕ್ಷಯ್​ ಕುಮಾರ್​ ಮತ್ತು ನನ್ನ ನಡುವೆ ಕೆಲವೊಂದಿಷ್ಟು ಗಾಸಿಪ್​ ಹರಿಬಿಟ್ಟಿದ್ದರು. ನಟರ ಜತೆ ನನ್ನ ಹೆಸರು ತಳುಕು ಹಾಕಿಕೊಂಡಿದ್ದರಿಂದ ನಾನು ತುಂಬಾ ಬೇಸರಗೊಂಡಿದ್ದೆ. ಒಂದೊಮ್ಮೆ ಆತ್ಮಹತ್ಯೆಗೂ ಚಿಂತಿಸಿದ್ದೆ. ಆದರೆ, ನಟಿಯರ ಜೀವನದಲ್ಲಿ ಇದೆಲ್ಲ ಸಾಮಾನ್ಯ ಎನಿಸಿತು. ನಾನು ಮದುವೆಯಾಗಿ ಅನೇಕ ವರ್ಷಗಳೇ ಕಳೆದಿದ್ದರೂ ಗಾಸಿಪ್​ಗಳೂ ಈಗಲೂ ಆಗಾ ಕೇಳಿಬರುತ್ತಿರುತ್ತದೆ.

ಯಾರಾದರೂ ಹೋಗಿ ನನ್ನ ಗಂಡನ ಬಳಿ, ನಿಮ್ಮ ಹೆಂಡತಿ ಆ ನಟರ ಜೊತೆ ಹರಟೆ ಹೊಡೆಯುತ್ತಿದ್ದರು ಎಂದು ಹೇಳಿದರೆ, ಓಹ್ ಹೌದಾ ಎಂದು ನನ್ನ ಪತಿ ಉತ್ತರಿಸುತ್ತಾರೆ. ಗಾಸಿಪ್​ ಬಗ್ಗೆ ಹೇಳಿದವರು ಸುಮ್ಮನೆ ಸಪ್ಪೆ ಮೋರೆಯಿಂದ ಹಿಂತಿರುಗಬೇಕಷ್ಟೇ. ಏಕೆಂದರೆ ನನ್ನ ಗಂಡನಿಗೆ ನನ್ನ ಬಗ್ಗೆ ಚೆನ್ನಾಗಿ ತಿಳಿದಿದೆ. ನನ್ನ ಪತಿ ಹೊರತು ಬೇರೆ ಯಾರೂ ನನ್ನನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಮೋಹಿನಿ ಖುಷಿಯಿಂದ ಹೇಳಿದ್ದಾರೆ. (ಏಜೆನ್ಸೀಸ್​)