ಸಿನಿವಾಣಿ

ಬಾಡಿಗೆ ತಾಯಿಯಾದ ನಟಿ ಕೃತಿ ಸನೋನ್

ಬಾಲಿವುಡ್​ನಲ್ಲಿ ಹಲವು ಸಿನಿಮಾಗಳಲ್ಲಿ ಬಿಜಿಯಾಗಿರುವ ನಟಿ ಕೃತಿ ಸನೋನ್, ‘ಮಿಮಿ’ ಶೀರ್ಷಿಕೆ ಸಿನಿಮಾದಲ್ಲಿ ನಟಿಸುತ್ತಿರುವುದು ಕಳೆದ ವರ್ಷವೇ ಅಧಿಕೃತವಾಗಿತ್ತು. ಇದೀಗ ಆ ಚಿತ್ರಕ್ಕೆ ಬಿಡುಗಡೆ ಭಾಗ್ಯ ಸಿಕ್ಕಿದೆ. ಅಂದರೆ, ಇದೇ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಚಿತ್ರಮಂದಿರವಾ? ಅಥವಾ ಒಟಿಟಿನಾ? ಸದ್ಯಕ್ಕೆ ಈ ಗೊಂದಲಕ್ಕೆ ಕೃತಿ ಉತ್ತರ ನೀಡಲು ಹೋಗಿಲ್ಲ. ಇದೀಗ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದ್ದು, ಇಲ್ಲಿಯವರೆಗೂ ಮಾಡದ ಹೊಸ ರೀತಿಯ ಪಾತ್ರ ‘ಮಿಮಿ’ ಚಿತ್ರದಲ್ಲಿ ಕೃತಿಗೆ ಸಿಕ್ಕಿದೆ. ಗ್ಲಾಮರಸ್ ಪಾತ್ರದ ಮೂಲಕವೇ ಗಮನ ಸೆಳೆದಿದ್ದ ಅವರು ‘ಮಿಮಿ’ಯಲ್ಲಿ ಬಾಡಿಗೆ ತಾಯಿಯಾಗಿದ್ದಾರೆ.

ಅಂದಹಾಗೆ, 2010ರಲ್ಲಿ ಮರಾಠಿಯಲ್ಲಿ ತೆರೆ ಕಂಡಿದ್ದ ‘ಮಲ ಆಯಿ ವ್ಹಾಯಚಯ್’ ಚಿತ್ರವನ್ನೇ ಹಿಂದಿಯಲ್ಲಿ ‘ಮಿಮಿ’ ಹೆಸರಿನಲ್ಲಿ ರಿಮೇಕ್ ಮಾಡಲಾಗಿದೆ. ಮೂಲ ಚಿತ್ರವನ್ನು ಸಮೃದ್ಧಿ ಎಂಬುವವರು ನಿರ್ದೇಶನ ಮಾಡಿದ್ದರು. 2011ರಲ್ಲಿ ಈ ಚಿತ್ರಕ್ಕೆ ಅತ್ಯುತ್ತಮ ಮರಾಠಿ ಸಿನಿಮಾ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಸಹ ಲಭಿಸಿತ್ತು. ಇದೀಗ ಹಿಂದಿಗೆ ಲಕ್ಷ್ಮಣ್ ಉಟೇಕರ್ ನಿರ್ದೇಶನ ಮಾಡಿದ್ದಾರೆ. ಬಹುತೇಕ ಒಟಿಟಿಯಲ್ಲಿಯೇ ಬಿಡುಗಡೆ ಆಗುವ ಸಾಧ್ಯತೆ ಇದೆ.