ಸಿನಿವಾಣಿ

ಬಹುಭಾಷಾ ನಟಿ ಕವಿತಾ ಮನೆಯಲ್ಲಿ ಮತ್ತೆ ಸಾವಿನ ಸೂತಕ! ಮಗ ಸತ್ತ ಬೆನ್ನಲ್ಲೇ ಮತ್ತೊಂದು ಶಾಕ್

ಚೆನ್ನೈ: ಕನ್ನಡ, ತೆಲಗು, ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿ ಅಭಿಮಾನಿಗಳ ಮನಸ್ಸು ಗೆದ್ದಿರುವ ಬಹುಭಾಷಾ ನಟಿ ಕವಿತಾ ಅವರ ಮನೆಯಲ್ಲಿ ಮತ್ತೊಮ್ಮೆ ಸಾವಿನ ಸೂತಕ ಎದುರಾಗಿದೆ. ಮಗ ಸತ್ತು 15 ದಿನಗಳ ಒಳಗೆ ನಟಿ ತಮ್ಮ ಪತಿಯನ್ನೂ ಕಳೆದುಕೊಂಡಿದ್ದಾರೆ.

ಕವಿತಾ ಅವರ ಮಗ ಸಂಜಯ್ ಕರೊನಾದಿಂದಾಗಿ ಜೂನ್ 15ರಂದು ಕೊನೆಯುಸಿರೆಳೆದಿದ್ದರು. ಅದಾಗಿ ಸರಿಯಾಗಿ 15 ದಿನಕ್ಕೆ ಅಂದರೆ ಜೂನ್ 30ಕ್ಕೆ ಅವರ ಪತಿ ದಶರಥ ರಾಜ್​ ಕೂಡ ಅದೇ ಕರೊನಾಕ್ಕೆ ಬಲಿಯಾಗಿದ್ದಾರೆ.

ದಶರಥ ರಾಜ್ ಅವರಿಗೆ ಹಲವು ದಿನಗಳ ಹಿಂದೆ ಕರೊನಾ ಸೋಂಕು ದೃಢವಾಗಿದ್ದು ಅವರು ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ಅವರು ಇಂದು ಸಾವನ್ನಪ್ಪಿದ್ದಾರೆ. ಮೊದಲೇ ಮಗನನ್ನು ಕಳೆದುಕೊಂಡ ನೋವಿನಲ್ಲಿ ಕುಗ್ಗಿದ್ದ ಕವಿತಾ ಅವರು ಇದೀಗ ಇನ್ನಷ್ಟು ನೋವಿಗೆ ಸಿಲುಕಿದ್ದಾರೆ.

1971ರಿಂದ ಸಿನಿಮಾ ಜರ್ನಿ ಆರಂಭಿಸಿದ ನಟಿ ಕವಿತಾ, ತೆಲಗು, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿ 300ಕ್ಕೂ ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. (ಏಜೆನ್ಸೀಸ್)