ಸಿನಿವಾಣಿ

ಕಾರುಣ್ಯಾರಾಮ್​ ಕೂದಲು ದಾನ; 14 ಇಂಚುಗಳಷ್ಟು ಉದ್ದದ ಕೇಶರಾಶಿ ಕಟ್..

ಬೆಂಗಳೂರು: ನಟ ಧ್ರುವ ಸರ್ಜಾ ‘ಪೊಗರು’ ಸಿನಿಮಾ ಸಲುವಾಗಿ ಉದ್ದ ಕೂದಲು ಬಿಟ್ಟಿದ್ದರು. ಆ ಸಿನಿಮಾ ಶೂಟಿಂಗ್ ಮುಗಿಸಿದ ಬಳಿಕ ಹಾಗೆ ಬಿಟ್ಟಿದ್ದ ಉದ್ದ ಕೂದಲನ್ನು ಕಿಮೋಥೆರಪಿಗೊಳಗಾದ ಕ್ಯಾನ್ಸರ್ ರೋಗಿಗಳಿಗೆ ನೀಡಿದ್ದರು. ಇದೀಗ ಅದೇ ಕೆಲಸವನ್ನು ನಟಿ ಕಾರುಣ್ಯಾ ರಾಮ್ ಸಹ ಮಾಡಿದ್ದಾರೆ. ಮೈಸೂರಿನಲ್ಲಿ ‘ಪೆಟ್ರೋಮ್ಯಾಕ್ಸ್’ ಸಿನಿಮಾ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ಮರಳಿರುವ ಕಾರುಣ್ಯಾ, ಕೂದಲಿಗೆ ಕತ್ತರಿ ಹಾಕಿದ್ದಾರೆ. 14 ಇಂಚುಗಳಷ್ಟು ಉದ್ದದ ಕೂದಲನ್ನು ಕತ್ತರಿಸಿ ಬೆಂಗಳೂರು ಹೇರ್ ಡೊನೇಷನ್ ಸಂಸ್ಥೆಯ ಮೂಲಕ ಕ್ಯಾನ್ಸರ್ ರೋಗಿಗಳಿಗೆ ನೀಡಿದ್ದಾರೆ. ‘2021ರ ಆರಂಭದಲ್ಲಿ ಅವಶ್ಯಕತೆ ಇರುವವರಿಗೆ ಏನಾದರೂ ಮಾಡಬೇಕು ಎಂದುಕೊಂಡಿದ್ದೆ. ಅದರಂತೆ ನನ್ನ 14 ಇಂಚುಗಳಷ್ಟು ಉದ್ದದ ತಲೆಕೂದಲುಗಳನ್ನು ನೀಡಿದ್ದೇನೆ. ಇಷ್ಟುದ್ದದ ಕೂದಲು ಬೆಳೆಯಬೇಕೆಂದರೆ ಏನಿಲ್ಲ ಅಂದರೂ ಮೂರು ವರ್ಷಗಳು ಬೇಕಾಗುತ್ತದೆ. ಇದರಿಂದ ಸಾಕಷ್ಟು ಮಹಿಳೆಯರು ಮುಂದೆ ಬಂದು ತಾವೂ ಈ ಕೆಲಸಕ್ಕೆ ಕೈ ಜೋಡಿಸಲಿದ್ದಾರೆ ಎಂಬ ಭರವಸೆ ಇದೆ’ ಎಂದಿದ್ದಾರೆ.