ಸಿನಿವಾಣಿ

ಮಹಿಳಾ ಪ್ರಧಾನ ಕಾಶಿಮಾ ; ‘ಟೆಂಪರ್’ ಹುಡುಗಿಗೆ ಬಂಪರ್ ಅವಕಾಶ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

‘ಟೆಂಪರ್’ ಹಾಗೂ ‘ಸೌತ್ ಇಂಡಿಯನ್ ಹೀರೋ’ ಚಿತ್ರಗಳಲ್ಲಿ ನಾಯಕಿಯಾಗಿ ಮಿಂಚಿದ್ದ ನಟಿ ಕಾಶಿಮಾ ರಫಿ ಇದೀಗ ಮಹಿಳಾ ಪ್ರಧಾನ ಚಿತ್ರವೊಂದರಲ್ಲಿ ನಾಯಕಿಯಾಗಿ ಮಿಂಚಲು ರೆಡಿಯಾಗಿದ್ದಾರೆ. ಮಂಗಳೂರು ಮೂಲದ ರಾಜೇಶ್ ನಿರ್ದೇಶಿಸುತ್ತಿರುವ ಈ ಚಿತ್ರದ ಶೂಟಿಂಗ್ ಈಗಾಗಲೇ ಪ್ರಾರಂಭವಾಗಿದ್ದು, ಇನ್ನಷ್ಟೇ ಟೈಟಲ್ ರಿವೀಲ್ ಮಾಡಬೇಕಿದೆ.

ಚಿತ್ರದ ಬಗ್ಗೆ ಕಾಶಿಮಾ, ‘ಮಹಿಳಾಪ್ರಧಾನ ಪಾತ್ರದಲ್ಲಿ ನಟಿಬೇಕು ಅಂತ ಮೊದಲಿನಿಂದಲೂ ಆಸೆಯಿತ್ತು. ಅದೀಗ ಈಡೇರುತ್ತಿದೆ. ಈ ಚಿತ್ರದಲ್ಲಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಮಹಾರಾಣಿ ಲುಕ್‌ನಲ್ಲಿ ಒಮ್ಮೆ ಹಾಗೂ ಪುರಾತತ್ವಶಾಸಜ್ಞೆಯಾಗಿ ಮತ್ತೊಂದು ಲುಕ್‌ನಲ್ಲಿ ನಟಿಸುತ್ತಿದ್ದೇನೆ. ಈ ಚಿತ್ರದಲ್ಲಿ ಫೈಟ್ಸ್ ಕೂಡ ಇರಲಿವೆ. ಹೀಗಾಗಿ ಫಿಟ್ನೆಸ್ ಮತ್ತು ಫೈಟ್ಸ್ ತರಬೇತಿ ಪಡೆಯುತ್ತಿದ್ದೇನೆ. ಹಗಲು, ರಾತ್ರಿ ಎನ್ನದೆ ಚಿತ್ರೀಕರಣ ನಡೆಯುತ್ತಿದೆ. ಈಗಾಗಲೇ ಶೇಕಡಾ 50ರಷ್ಟು ಶೂಟಿಂಗ್ ಪೂರ್ಣಗೊಂಡಿದೆ’ ಎಂದು ಮಾಹಿತಿ ನೀಡುತ್ತಾರೆ. ಇದರ ಜತೆ ಮತ್ತೊಂದು ಕನ್ನಡ ಕಥೆ ಕೇಳಿದ್ದು, ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಘೋಷಣೆಯಾಗುವ ನಿರೀಕ್ಷೆ ಕಾಶಿಮಾ ಅವರದು.

ವೆಬ್‌ಸರಣಿಗೆ ಪದಾರ್ಪಣೆ
ಸಿನಿಮಾಗಳ ಜತೆ ಕಾಶಿಮಾ ರಫಿ ವೆಬ್‌ಸರಣಿಯಲ್ಲೂ ನಟಿಸಲಿದ್ದಾರಂತೆ. ‘ವೆಬ್‌ಸರಣಿಗಳಲ್ಲಿ ಈ ಹಿಂದೆಯೇ ಅವಕಾಶಗಳು ಬಂದರೂ, ಸಿನಿಮಾ ಬಗ್ಗೆ ಹೆಚ್ಚು ಗಮನ ಹರಿಸಿದ್ದರಿಂದ, ಒಪ್ಪಿಕೊಂಡಿರಲಿಲ್ಲ. ಆದರೆ, ಕಲಾವಿದೆಯಾಗಿ ನಟನೆಯ ಮುಖ್ಯ ಅದು ಸಿನಿಮಾ ಅದರೇನು ಅಥವಾ ವೆಬ್‌ಸರಣಿಯಾದರೇನು ಅಂತನ್ನಿಸಿತು. ಹೀಗಾಗಿ ಸದ್ಯ ಒಟಿಟಿಯೊಂದರ ಜತೆ ವೆಬ್‌ಸರಣಿಯಲ್ಲಿ ನಟಿಸುವುದರ ಕುರಿತು ಮಾತುಕತೆ ನಡೆಯುತ್ತಿದೆ’ ಎಂದು ಹೇಳಿಕೊಳ್ಳುತ್ತಾರೆ.