ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಬಳಿಕ ಅವರ ಸಾವಿಗೆ ಖಿನ್ನತೆಯೇ ಕಾರಣ ಎಂದು ವೈದ್ಯರು ತಿಳಿಸಿದ್ದರು. ಅದಾದ ಬಳಿಕ ಬಾಲಿವುಡ್ನಲ್ಲಿ ಖಿನ್ನತೆ ಬಗ್ಗೆಯೇ ದೊಡ್ಡ ಅಭಿಯಾನ ಶುರುವಾಯಿತು. ಆ ಮಹಾನರಕವನ್ನು ಎದುರಿಸಿ ಬಂದಿದ್ದ ಘಟಾನುಘಟಿಗಳು ತಮ್ಮ ಆ ಅನುಭವವನ್ನು ಎಲ್ಲರೆದುರು ಹಂಚಿಕೊಂಡಿದ್ದರು.
ಸ್ವತಃ ದೀಪಿಕಾ ಪಡುಕೋಣೆ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ, ಸ್ನೇಹಿತರೊಂದಿಗೆ ಮಾತನಾಡಿ, ಸಾಧ್ಯವಾದಷ್ಟು ನಿಮ್ಮ ನೋವನ್ನು ಹಂಚಿಕೊಳ್ಳಿ ಎಂದಿದ್ದರು. ಇದೀಗ ಸ್ಯಾಂಡಲ್ವುಡ್ ನಟಿ ಜಯಶ್ರೀ ರಾಮಯ್ಯ ಸಹ ಖಿನ್ನತೆಯಿಂದ ಬಳಲುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ.
ಹೌದು, ಈ ವಿಚಾರವನ್ನು ಸ್ವತಃ ಜಯಶ್ರೀ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ. ‘ನನ್ನಿಂದಾಗದು, ಇಡೀ ಜಗತ್ತಿಗೆ ಮತ್ತು ಖಿನ್ನತೆಗೆ ಗುಡ್ಬೈ’ ಎಂದು ಬರೆದುಕೊಂಡಿದ್ದಾರೆ. ಈ ರೀತಿ ಪೋಸ್ಟ್ ಮಾಡುತ್ತಿದ್ದಂತೆ ಸಾಕಷ್ಟು ಮಂದಿ ಸ್ನೇಹಿತರು ಜಯಶ್ರೀ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆದರೆ, ಯಾರ ಕರೆಯನ್ನೂ ಅವರು ಸ್ವೀಕರಿಸುತ್ತಿಲ್ಲ.
ನಟಿ ಅದ್ವಿತಿ ಶೆಟ್ಟಿ,, ಆರೋಹಿ ನಾರಾಯಣ್, ನಿರ್ದೇಶಕ ಮಯೂರ ರಾಘವೇಂದ್ರ ಸೇರಿ ಸಾಕಷ್ಟು ಮಂದಿ ಆತುರದ ನಿರ್ಧಾರಕ್ಕೆ ಮುಂದಾಗಬೇಡ ಎಂದು ಕಮೆಂಟ್ ಮೂಲಕ ಮನವಿ ಮಾಡಿದ್ದಾರೆ. ಆಸ್ಪತ್ರೆ ಬಳಿಯಲ್ಲಿಯೇ ಅವರ ಸಹೋದರನ ಜತೆ ಜಯಶ್ರಿ ಇರುವುದಾಗಿ ಅದ್ವಿತಿ ಫೇಸ್ಬುಕ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು ಕೆಲವರು ಫೇಸ್ಬುಕ್ ಮೆಸೆಂಜರ್ ಮೂಲಕವೇ ಕರೆ ಮಾಡಿದ್ದಾರೆ. ಅವರ ಕರೆಗೂ ಜಯಶ್ರೀ ಸ್ಪಂದಿಸುತ್ತಿಲ್ಲ.
ಅಂದಹಾಗೆ, ಬಿಗ್ಬಾಸ್ ಮೂಲಕ ನಾಡಿನ ಮನೆ ಮಾತಾದ ಜಯಶ್ರೀ ರಾಮಯ್ಯ, ಸ್ಯಾಂಡಲ್ವುಡ್ನಲ್ಲಿಯೂ ಗುರುತಿಸಿಕೊಂಡವರು. ಉಪ್ಪು ಹುಳಿ ಖಾರ ಸಿನಿಮಾ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗಲೂ ಒಂದಷ್ಟು ಪ್ರಾಜೆಕ್ಟ್ಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಆದರೆ, ಇದೀಗ ಫೇಸ್ಬುಕ್ನಲ್ಲಿ ಈ ರೀತಿ ಪೋಸ್ಟ್ ಮಾಡಿ ಎಲ್ಲರನ್ನು ಆತಂಕಕ್ಕೆ ತಳ್ಳಿದ್ದಾರೆ.