ಸಿನಿವಾಣಿ

ತೂಕ ಯಾವ ಲೆಕ್ಕ?; 33 ಕೆಜಿ ಇಳಿಸಿಕೊಂಡ ಗೀತಾ ಭಾರತೀ ಭಟ್

Bengaluru - Cinema - Pramod Hegde

‘ಬ್ರಹ್ಮಗಂಟು‘ ಧಾರಾವಾಹಿಯಲ್ಲಿ ‘ಗುಂಡಮ್ಮ’ ಪಾತ್ರ ಮೂಲಕ ಗಮನ ಸೆಳೆದ ನಟಿ ಗೀತಾ ಭಾರತೀ ಭಟ್ ಈಗ ಚಂದನವನಕ್ಕೆ ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ‘ರವಿಕೆ ಪ್ರಸಂಗ’ ಚಿತ್ರದಲ್ಲಿ ನಾಯಕಿಯಾಗಿ ಮಿಂಚಲು ರೆಡಿಯಾಗಿದ್ದಾರೆ. ಅದರ ಜತೆಗೆ ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲೂ ತೊಡಗಿಸಿಕೊಂಡಿದ್ದ ಗೀತಾ, ಪಾತ್ರ, ಫಿಟ್‌ನೆಸ್ ಹಾಗೂ ಡಯೆಟ್ ಬಗ್ಗೆ ವಿಜಯವಾಣಿ ಜತೆ ಮಾತನಾಡಿದ್ದಾರೆ.

‘ರವಿಕೆ ಪ್ರಸಂಗ’ದಲ್ಲಿ ನಿಮ್ಮ ಪಾತ್ರ?
ಸಾನ್ವಿ ಎನ್ನುವ ಸರಳ ಹಾಗೂ ಮುಗ್ಧ ಹುಡುಗಿ. ಉಳಿದ ಹುಡುಗಿಯರ ಹಾಗೆ ತೆಳ್ಳಗೆ, ಬೆಳ್ಳಗೆ ಗ್ಲಾಮರಸ್ ಆಗಿ ಇಲ್ಲದಿದ್ದರೂ ಅವಳದ್ದೇ ರೀತಿಯಲ್ಲಿ ಸುಂದರವಾಗಿರುತ್ತಾಳೆ. ಅವಳಿಗೆ ಮದುವೆ ಆಗಬೇಕು ಎನ್ನುವಾಸೆ. ಅವಳಿಗಿಂತಲೂ ಹೆಚ್ಚು ಆಸೆ ತಂದೆ, ತಾಯಿಗೆ ಇರುತ್ತದೆ. ಆಕೆಯ ಮದುವೆಯ ಸುತ್ತ ಸುತ್ತುವ ಕಥೆ.

ಕಿರುತೆರೆಯಿಂದ ಹಿರಿತೆರೆಯ ಪಯಣ ಹೇಗಿತ್ತು?
-ನನಗೊಂದು ಪರಿಚಯ ನೀಡಿದ್ದು ಕಿರುತೆರೆ. ದೊಡ್ಡ ಪರದೆ ಹೊಸ ಅನುಭವ. ಶೂಟಿಂಗ್‌ನಿಂದ ಹಿಡಿದು ಪರದೆಯ ಮೇಲೆ ನನ್ನನ್ನು ನಾನು ನೋಡುವವರೆಗೂ ಪ್ರತಿಯೊಂದು ಅನುಭವವೂ ಅತ್ಯಮೂಲ್ಯ ಎನಿಸಿತು. ಈ ಸಿನಿಮಾದಲ್ಲಿ ಮನರಂಜನೆಯ ಜತೆಗೆ ಸಂದೇಶವೂ ಇದೆ. ಹೀಗಾಗಿ ಒಂದೊಳ್ಳೆ ಚಿತ್ರದಲ್ಲಿ ಕೆಲಸ ಮಾಡಿದ ಖುಷಿಯಿದೆ.

ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿದ್ದೀರಿ..
-ಹೌದು, ಈ ಸಿನಿಮಾ ಮಾಡುವ ಮುನ್ನ ತೂಕ ಇಳಿಸಿಕೊಳ್ಳುವ ಜರ್ನಿಯಲ್ಲಿದ್ದೆ. ಸುಮಾರು 33 ಕೆ.ಜಿ ಇಳಿಸಿಕೊಂಡಿದ್ದೆ. ಆಗ ಈ ಸಿನಿಮಾದ ಆರ್ ಬಂತು. ಪಾತ್ರಕ್ಕಾಗಿ ನಾನು ದಪ್ಪ ಇರಬೇಕಾಯಿತು. ಹೀಗಾಗಿ ತೂಕ ಇಳಿಸಿಕೊಳ್ಳುವ ಕಾರ್ಯಕ್ಕೆ ಸಣ್ಣ ಬ್ರೇಕ್ ನೀಡಿದ್ದೇನೆ.

ತೂಕ ಇಳಿಸಿಕೊಳ್ಳುವ ಜರ್ನಿ ಹೇಗಿದೆ?
-ನಮ್ಮ ದೇಹ ದೇವಸ್ಥಾನ ಇದ್ದಂತೆ. ಅದರ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು. ಮೊದಲ ಆದ್ಯತೆ ಆರೋಗ್ಯಕ್ಕೆ ನೀಡಬೇಕು. ಆರೋಗ್ಯವಾಗಿರಬೇಕು ಎನ್ನುವುದು ರೇಸ್‌ನಂತಾಗಿದೆ. ಬೇಗ ಸಣ್ಣ ಆಗಬೇಕು ಎಂದು ಅನೇಕರು ಶಾರ್ಟ್‌ಕಟ್‌ಗಳನ್ನು ಬಳಸುತ್ತಾರೆ. ನೈಸರ್ಗಿಕವಲ್ಲದ ಪದಾರ್ಥಗಳನ್ನು ಸೇವಿಸುತ್ತಾರೆ. ಅಂತಹ ಪದಾರ್ಥಗಳು ಪ್ರಾಣಕ್ಕೆ ಕುತ್ತು ತಂದರೂ ತರಬಹುದು. ಎಷ್ಟೋ ಹೆಣ್ಣುಮಕ್ಕಳಿಗೆ ಸಣ್ಣ ಆಗಬೇಕು ಅಂತಾಸೆ ಇರುತ್ತದೆ. ಮೊದಲಿಗೆ ಅವರೆಲ್ಲರೂ ತಾವು ಹೇಗಿದ್ದಾರೋ ಹಾಗೆ ತಮ್ಮನ್ನು ಪ್ರೀತಿಸಬೇಕು. ಆಗ ಸಣ್ಣ ಆಗುವ ಜರ್ನಿ ಕೂಡ ಸುಂದರವಾಗಿರುತ್ತದೆ. ವ್ಯಾಯಾಮ ಮತ್ತು ಆರೋಗ್ಯಕರ, ಪೌಷ್ಠಿಕಾಂಶ, ಸರಿಯಾದ ನಿದ್ರೆ ಮಾಡುವುದರಿಂದ ತೂಕ ಇಳಿಸಿಕೊಳ್ಳಬೇಕು. ನಾನು ಇದನ್ನೇ ರೂಢಿಸಿಕೊಂಡಿದ್ದೇನೆ. ಹಾಲು ಬಿಟ್ಟೆ, ಅನ್ನದ ಬದಲು ಮಿಲೆಟ್ಸ್ ಸೇವಿಸುತ್ತೇನೆ, ಸಕ್ಕರೆ ತಿನ್ನುವುದಿಲ್ಲ.

ಮುಂದೆ ಗ್ಲಾಮರಸ್ ಪಾತ್ರದಲ್ಲಿ ನೋಡಬಹುದಾ?
-ಭಿನ್ನ ವಿಭಿನ್ನ ಪಾತ್ರಗಳನ್ನು ಮಾಡಬೇಕು ಎನ್ನುವ ಆಸೆಯಿದೆ. ನಾನು ಕಾಣುವ ರೀತಿ ಬದಲಾಗಬಹುದು, ಪಾತ್ರಗಳೂ ಬದಲಾಗಬಹುದು. ಇಷ್ಟು ದಿನ ಪಾಪದ ಹುಡುಗಿಯಾಗಿ ನೋಡುತ್ತಿದ್ದವರು ಮುಂದೊಂದು ದಿನ ನೆಗೆಟಿವ್ ಪಾತ್ರದಲ್ಲೂ ನೋಡಬಹುದು, ಗೊತ್ತಿಲ್ಲ. ಪಾತ್ರ ಯಾವ ರೀತಿ ಡಿಮ್ಯಾಂಡ್ ಮಾಡುತ್ತದೆಯೋ ಆ ರೀತಿ ಇರಬೇಕು. ಆದರೆ, ಗ್ಲಾಮರಸ್ ಎಂದಾಕ್ಷಣ ಬಾಡಿ ಶೋ ಅಂಥದ್ದಲ್ಲ. ನನ್ನ ಕಂರ್ಟ್ ರೆನ್‌ನಲ್ಲಿ ಮಾಡುತ್ತೇನೆ.