ಸಿನಿವಾಣಿ

ಭಾವನಾ...ಜೀವನ: ಬರ್ತ್​ಡೇ ಹುಡುಗಿಯ ಮನದಾಳ

lakshmihegde

| ಕೆ.ಬಿ.ಶುಭಾ, ಬೆಂಗಳೂರು

‘ಗಾಳಿಪಟ’ ಖ್ಯಾತಿಯ ಬೊಗಸೆ ಕಂಗಳ ಚೆಲುವೆ ಭಾವನಾ ರಾವ್ ಶನಿವಾರ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಜನ್ಮದಿನ ಪ್ರಯುಕ್ತ ಶನಿವಾರ ಹೆಣ್ಣೂರು ಕಡೆ ಇರುವ ವಲಸಿಗರಿಗೆ ದಿನಸಿ ಕಿಟ್ ವಿತರಿಸಿ ಸಂಭ್ರಮಿಸಿದ್ದಾರೆ. ಕಳೆದೊಂದು ವರ್ಷದಲ್ಲಿ ಭಾವನಾ ಅಭಿನಯದ ಯಾವ ಸಿನಿಮಾ ಬಿಡುಗಡೆಯಾಗಿಲ್ಲ. ಇನ್ನು ‘ಹೊಂದಿಸಿ ಬರೆಯಿರಿ’ ಎಂಬ ಚಿತ್ರದಲ್ಲಿ ಅವರು ನಟಿಸಿದ್ದು, ಲಾಕ್​ಡೌನ್​ಗೂ ಮೊದಲು ಚಿತ್ರೀಕರಣದಲ್ಲಿ ಭಾಗವಹಿಸಿದ್ದರಂತೆ. ‘ಇನ್ನೆರಡು ದಿನಗಳ ಶೂಟಿಂಗ್ ಮುಗಿಸಿದ್ದರೆ ಚಿತ್ರೀಕರಣ ಸಂಪೂರ್ಣವಾಗುತ್ತಿತ್ತು. ಪ್ರಸ್ತುತ ಕರೊನಾ ಭೀತಿ ಇರುವುದರಿಂದ ಇನ್ನೊಂದು ತಿಂಗಳು ಚಿತ್ರೀಕರಣ ಇಲ್ಲ’ ಎನ್ನುತ್ತಾರೆ.

ದೇವರು ಕೊಟ್ಟ ಕಾಣಿಕೆ: ಯಾವುದೇ ಚಿತ್ರ ಬಿಡುಗಡೆಯಾಗಿಲ್ಲ ಎಂಬ ಕಾರಣಕ್ಕೆ ಸಿನಿಮಾದಿಂದ ದೂರಾಗಿದ್ದೇನೆ ಎಂದಲ್ಲ ಎನ್ನುವ ಭಾವನಾ, ‘ಮನಸ್ಸಿಗೆ ಇಷ್ಟ ಆಗುವಂತಹ ಕಥೆ ಸಿಗಬೇಕು. ಯಾವುದೇ ಕಥೆ ಕೇಳಿದರೂ, ಎಮೋಷನ್ ಹೇಗೆ ಕನೆಕ್ಟ್ ಆಗಿದೆ, ನನ್ನ ಪಾತ್ರ ಹೇಗಿದೆ ಎಂಬುದನ್ನು ನೋಡುತ್ತೇನೆ. ವರ್ಷವಾದರೂ ಸಿನಿಮಾ ಮಾಡದಿದ್ದರೂ ಅಭಿಮಾನಿಗಳು ತೋರುವ ಪ್ರೀತಿ ರೋಮಾಂಚನ. ಅದು ದೇವರು ಕೊಟ್ಟ ಕಾಣಿಕೆ ಎಂದೇ ಭಾವಿಸುತ್ತೇನೆ’ ಎನ್ನುತ್ತಾರೆ. ಇದನ್ನೂ ಓದಿ: ‘ವಿರೂಷ್ಕಾ ಡಿವೋರ್ಸ್’ ಭರ್ಜರಿ ಟ್ರೆಂಡಿಂಗ್‌ನಲ್ಲಿದೆ ಯಾಕೆ ಗೊತ್ತೇ?

ಲಾಕ್​ಡೌನ್​ನಿಂದ ತಾಳ್ಮೆ ಕಲಿತೆ

‘ಲಾಕ್​ಡೌನ್​ನ ಮೊದಲ ವಾರ ಅಷ್ಟಾಗಿ ಏನೂ ಅನ್ನಿಸಿಲ್ಲ. ನಾನು ಹೆಚ್ಚಾಗಿ ಟ್ರಾವೆಲ್ ಮಾಡುವುದರಿಂದ ನಂತರದ ದಿನಗಳಲ್ಲಿ ಸಿಕ್ಕಾಪಟ್ಟೆ ಕಷ್ಟ ಎನಿಸಲು ಆರಂಭಿಸಿತು. ವಾರದ ನಂತರ ಅದಕ್ಕೆ ಹೊಂದಿಕೊಂಡೆ. ಮನೆ ಸ್ವಚ್ಛಗೊಳಿಸುವುದು, ಸಿನಿಮಾ-ಡಾಕ್ಯುಮೆಂಟರಿ ನೋಡುವುದು, ಕುಟುಂಬದವರ ಜತೆ ಹರಟುವುದು, ಅಮ್ಮನಿಗೆ ಸಹಾಯ ಮಾಡುವುದು... ಹೀಗೆ ಅಡುಗೆ ಬಿಟ್ಟು ಇನ್ನೆಲ್ಲ ಕೆಲಸ ಮಾಡಿದ್ದೇನೆ. ಒಂದು ರೀತಿಯಲ್ಲಿ ಲಾಕ್​ಡೌನ್ ನನಗೆ ತಾಳ್ಮೆ ಕಲಿಸಿದೆ. ಅದರಿಂದ ಮೌಲ್ಯ ಅರಿತೆ, ಸಂಬಂಧ, ಬಾಂಧವ್ಯ ಗಟ್ಟಿಗೊಂಡಿದೆ’ ಎನ್ನುತ್ತಾರೆ ಅವರು.

ಹಿಂದಿಯಲ್ಲಿ ‘ಬೈಪಾಸ್ ರೋಡ್’ ಸಿನಿಮಾ ಬಿಡುಗಡೆ ಆದ ಮೇಲೆ ಅಲ್ಲಿಯ ಕೆಲ ಪ್ರಾಜೆಕ್ಟ್ ಬಗ್ಗೆ ಮಾತುಕತೆ ನಡೆಯುತ್ತಿತ್ತು. ಅಷ್ಟರಲ್ಲಿ ಕರೊನಾ ಬಂತು. ಮೊದಲಿಗೆ ನಾನು ಕನ್ನಡದ ನಟಿ. ಬೇರೆ ಭಾಷೆಗಳಲ್ಲಿ ಅವಕಾಶ ಸಿಕ್ಕರೆ ಖಂಡಿತ ಮಾಡುತ್ತೇನೆ. | ಭಾವನಾ ರಾವ್ ನಟಿ
ನಟನೆಗೆ ಮೊದಲ ಆದ್ಯತೆ

ಕಳೆದ ವರ್ಷ ಬಿಡುಗಡೆಯಾದ ‘ಯಾನ’ ಚಿತ್ರಕ್ಕೆ ನೃತ್ಯ ನಿರ್ದೇಶನ ಮಾಡಿದ್ದರು ಭಾವನಾ. ಆ ನಂತರ ಅವರು ಯಾವುದೇ ಚಿತ್ರಕ್ಕೂ ಕೊರಿಯೋಗ್ರಫಿ ಮಾಡಿರಲಿಲ್ಲ. ಈ ಕುರಿತು ಮಾತನಾಡುವ ಅವರು, ‘ಸ್ಟೇಜ್ ಕೊರಿಯೋಗ್ರಫಿಗೆ ಹೋಲಿಸಿದರೆ, ಸಿನಿಮಾದಲ್ಲಿ ನೃತ್ಯ ಕಂಪೋಸ್ ಮಾಡುವುದು ಕಷ್ಟ. ‘ಯಾನ’ ಸಿನಿಮಾದಲ್ಲಿ ನೃತ್ಯ ನಿರ್ದೇಶನ ಮಾಡಿದ ಮೇಲೆ ಅನುಭವ ಆಯಿತು. ಮುಂದೆ ಅವಕಾಶ ಸಿಕ್ಕರೆ ಮುಂದುವರೆಸುತ್ತೇನೆ. ಆದರೆ, ನನಗೆ ನಟನೆಯಲ್ಲೇ ಹೆಚ್ಚು ಆಸಕ್ತಿ’ ಎನ್ನುತ್ತಾರೆ ಅವರು.

ಮನೆಯಲ್ಲೇ ಯೋಗ-ಧ್ಯಾನ

ಫಿಟ್​ನೆಸ್ ಕಾಪಾಡಿಕೊಳ್ಳುವ ವಿಷಯದಲ್ಲಿ ಭಾವನಾ ಯಾವತ್ತೂ ರಾಜಿ ಮಾಡಿಕೊಳ್ಳುವುದಿಲ್ಲವಂತೆ. ಲಾಕ್​​ಡೌನ್​ ವೇಳೆ‘ಮನೆಯಲ್ಲೇ ಎಷ್ಟು ಸಾಧ್ಯವೋ ಅಷ್ಟು ಯೂಟ್ಯೂಬ್ ನೋಡಿಕೊಂಡು ಯೋಗ ಹಾಗೂ ವರ್ಕ್ ಔಟ್ ಮಾಡುತ್ತಿದ್ದೆ. ಇದರ ಜತೆಗೆ ಧ್ಯಾನವನ್ನು ಅಭ್ಯಾಸ ಮಾಡಿಕೊಂಡಿದ್ದೇನೆ’ ಎನ್ನುತ್ತಾರೆ ಭಾವನಾ.