ಬೆಂಗಳೂರು: ‘ಸಮುದ್ರಂ’ ಶೀರ್ಷಿಕೆ ಸಿನಿಮಾದಲ್ಲಿ ನಟಿಸುವ ಮೂಲಕ ನಿರ್ವಣದಲ್ಲಿಯೂ ಕೈ ಜೋಡಿಸಿದ್ದರು ನಟಿ ಅನಿತಾ ಭಟ್. ಇದೀಗ ಸದ್ದಿಲ್ಲದೆ ಎರಡನೇ ಚಿತ್ರವನ್ನು ನಿರ್ವಿುಸಿ, ಅದರಲ್ಲಿಯೂ ಮುಖ್ಯ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ. ಆ ಚಿತ್ರದ ಹೆಸರು ‘ಇಂದಿರಾ’. ಶುಕ್ರವಾರವಷ್ಟೇ ಸಿನಿಮಾದ ಮೊದಲ ಪೋಸ್ಟರ್ ಅನ್ನು ನಟ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿದ್ದಾರೆ. ‘ಇಂದಿರಾ’ ಎಂದ ತಕ್ಷಣ ಇದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕುರಿತಾದ ಚಿತ್ರವೇನಲ್ಲ. ಹಾಗಾದರೆ, ಏನಿದು ಸಿನಿಮಾ? ಅದನ್ನು ಅನಿತಾ ಹೀಗೆ ವಿವರಿಸುತ್ತಾರೆ.
‘ಮೊದಲನೆಯದಾಗಿ ಈ ಚಿತ್ರದ ಶೀರ್ಷಿಕೆಗೂ ಇಂದಿರಾ ಗಾಂಧಿಗೂ ಯಾವುದೇ ಸಂಬಂಧವಿಲ್ಲ. ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ. ನಾನಿಲ್ಲಿ ಅಂಧ ಮಹಿಳೆಯ ಪಾತ್ರ ಮಾಡುತ್ತಿದ್ದೇನೆ. ಅಪಘಾತವೊಂದರಲ್ಲಿ ದೃಷ್ಟಿ ಕಳೆದುಕೊಂಡ ಬಳಿಕ ಏನೆಲ್ಲ ಘಟಿಸುತ್ತದೆ ಎಂಬುದನ್ನು ಸಿನಿಮಾದಲ್ಲಿ ಹೇಳಿದ್ದೇವೆ’ ಎನ್ನುತ್ತಾರೆ. ಈಗಾಗಲೇ ಶೂಟಿಂಗ್ ಮುಗಿಸಿರುವ ‘ಇಂದಿರಾ’ ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆ ಆಗಲಿದೆ. ನೀತು ಶೆಟ್ಟಿ, ಶಫಿ, ಚಕ್ರವರ್ತಿ ಚಂದ್ರಚೂಡ್, ರೆಹಮಾನ್ ಹಾಸನ್, ಕಾರ್ತಿಕ್ ಗೌಡ ಸೇರಿ ಹಲವರು ಈ ಸಿನಿಮಾದಲ್ಲಿದ್ದಾರೆ. ಲೋಹಿತ್ ಎಲ್ ಸಂಗೀತ ನೀಡಿದರೆ, ಛಾಯಾಗ್ರಹಣ, ಸಂಕಲನ ಮತ್ತು ಕಥೆ-ಚಿತ್ರಕಥೆಯನ್ನು ರಿಷಿಕೇಶ್ ಬರೆದಿದ್ದು, ಚಿತ್ರದ ನಿರ್ದೇಶನವನ್ನು ಯಾರು ಮಾಡಿದ್ದಾರೆ ಎಂಬ ವಿಷಯವನ್ನು ಚಿತ್ರತಂಡ ರಹಸ್ಯವಾಗಿಟ್ಟಿದೆ.