ಶವದ ಪಾತ್ರ ಮಾಡಲು ನಟಿ ಅರ್ಚನಾ ಗೌತಮ್​ ಪಡೆದ ಸಂಭಾವನೆ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಚಿತ! Actress Archana Gautham  
ಸಿನಿವಾಣಿ

ಶವದ ಪಾತ್ರ ಮಾಡಲು ನಟಿ ಅರ್ಚನಾ ಗೌತಮ್​ ಪಡೆದ ಸಂಭಾವನೆ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಚಿತ! Actress Archana Gautham

ಪ್ರಮುಖ ಮುಖ್ಯಾಂಶಗಳು

  • ದಿನಕ್ಕೆ 3,000 ರೂ. ಸಂಭಾವನೆಗಾಗಿ ಹೆಣವಾಗಿ ಮಲಗಿದ್ದ ನಟಿ
  • 'ಸಿಐಡಿ' ಟಿವಿ ಸರಣಿಯ ಶೂಟಿಂಗ್​ ದಿನಗಳ ಕಷ್ಟದ ಜರ್ನಿ ಬಿಚ್ಚಿಟ್ಟ ಅರ್ಚನಾ ಗೌತಮ್
  • ಸಿನಿಮಾ ರಂಗದಲ್ಲಿ ರಾತ್ರೋರಾತ್ರಿ ಯಾರೂ ಸ್ಟಾರ್ ಆಗಲ್ಲ ಎಂದ ಅರ್ಚನಾ
Actress Archana Gautham : ಬಿಗ್ ಬಾಸ್ ಖ್ಯಾತಿಯ ನಟಿ ಅರ್ಚನಾ ಗೌತಮ್ ತಮ್ಮ ಆರಂಭಿಕ ದಿನಗಳ ಕಠಿಣ ಹೋರಾಟವನ್ನು ನೆನಪಿಸಿಕೊಂಡಿದ್ದು, ಜನಪ್ರಿಯ ಕ್ರಿಮಿನಲ್ ಸರಣಿ 'ಸಿಐಡಿ' (CID) ಯಲ್ಲಿ ಶವದ ಪಾತ್ರ ಮಾಡಿದ್ದ ವಿಚಿತ್ರ ಅನುಭವವನ್ನು ಹಂಚಿಕೊಂಡಿದ್ದಾರೆ.
ರಾಜೀವ್ ಖಂಡೇಲ್ವಾಲ್ ನಡೆಸಿಕೊಡುವ 'ತುಮ್ ಹೋ ನಾ' ರಿಯಾಲಿಟಿ ಶೋನಲ್ಲಿ ಮಾತನಾಡಿದ ಅವರು, ಚಿತ್ರರಂಗದಲ್ಲಿ ರಾತ್ರೋರಾತ್ರಿ ಯಶಸ್ಸು ಸಿಗುವುದಿಲ್ಲ ಎಂಬುದಕ್ಕೆ ತಮ್ಮದೇ ಜೀವನ ಉದಾಹರಣೆ ಎಂದಿದ್ದಾರೆ. ತಮ್ಮ ವೃತ್ತಿಜೀವನದ ಮೂರನೇ ಪ್ರಾಜೆಕ್ಟ್ ಆಗಿದ್ದ 'ಸಿಐಡಿ' ಟಿವಿ ಸರಣಿಯಲ್ಲಿ ತಮಗೆ ದಿನಕ್ಕೆ 3,000 ರೂಪಾಯಿ ಸಂಭಾವನೆ ನೀಡಲಾಗುತ್ತಿತ್ತು ಮತ್ತು ಅದಕ್ಕಾಗಿ ತಾವು ಶವವಾಗಿ ನಟಿಸಬೇಕಿತ್ತು ಎಂದು ತಿಳಿಸಿದ್ದಾರೆ.
ಶವದಂತೆ ಯಾವುದೇ ಚಲನೆ ಇಲ್ಲದೆ ನಟಿಸುವ ಅಭ್ಯಾಸ ತಮಗಿಲ್ಲದ ಕಾರಣ ಆ ರೋಲ್ ಮಾಡುವುದು ತುಂಬಾ ಕಷ್ಟವಾಗಿತ್ತು, ಶೂಟಿಂಗ್ ವೇಳೆ ತಾವು ಮಲಗಿದ್ದಾಗ ಅಲ್ಲಿನ ಹಿರಿಯ ನಟರು ಬಂದು ಕಣ್ಣುಗಳನ್ನು ತೆರೆದು ಪರೀಕ್ಷಿಸುತ್ತಿದ್ದ ದಿನಗಳನ್ನು ಅವರು ನೆರೆದವರ ಮುಂದೆ ಬಿಚ್ಚಿಟ್ಟಿದ್ದಾರೆ. ಈ ಉದ್ಯಮದಲ್ಲಿ ಪ್ರತಿಯೊಬ್ಬ ಹೊಸ ಕಲಾವಿದರೂ ಇಂತಹ ಸಣ್ಣಪುಟ್ಟ ಪಾತ್ರಗಳ ಮೂಲಕವೇ ದೊಡ್ಡ ಮಟ್ಟದ ಸವಾಲುಗಳನ್ನು ಎದುರಿಸಿ ಬೆಳೆಯಬೇಕಾಗುತ್ತದೆ ಎಂದು ಅರ್ಚನಾ ಭಾವುಕರಾಗಿ ನುಡಿದಿದ್ದಾರೆ.
ಅನೇಕ ಜನರು ಚಿತ್ರರಂಗದಲ್ಲಿ ಎಲ್ಲವೂ ತುಂಬಾ ಸುಲಭ ಎಂದು ಭಾವಿಸುತ್ತಾರೆ ಮತ್ತು ಇಲ್ಲಿ ರಾತ್ರೋರಾತ್ರಿ ಅವಕಾಶಗಳು ಹುಡುಕಿಕೊಂಡು ಬರುತ್ತವೆ ಅಂದುಕೊಳ್ಳುತ್ತಾರೆ, ಆದರೆ ಅದು ನಿಜವಲ್ಲ ಎಂದು ಅರ್ಚನಾ ಹೇಳಿದ್ದಾರೆ. ತಾವು ಇಂದು ಈ ಮಟ್ಟಕ್ಕೆ ಬೆಳೆಯಲು ಪಟ್ಟಿರುವ ಶ್ರಮ ಮತ್ತು ಎದುರಿಸಿದ ಅಡೆತಡೆಗಳ ಬಗ್ಗೆ ಹಲವರಿಗೆ ತಿಳಿಯದೇ ಇರುವ ಅನೇಕ ಸಂಗತಿಗಳಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ, ಭಾರತೀಯ ಕಿರುತೆರೆ ಮತ್ತು ಚಲನಚಿತ್ರರಂಗದ ಪ್ರಮುಖ ನಟಿಯಾದ ಅರ್ಚನಾ ಗೌತಮ್ ಅವರು ರಾಜಕಾರಣಿ, ಮಾಡೆಲ್ ಹಾಗೂ ಬ್ಯೂಟಿ ಪೆಜೆಂಟ್ ವಿಜೇತೆಯೂ ಆಗಿದ್ದಾರೆ. 2014ರಲ್ಲಿ 'ಮಿಸ್ ಉತ್ತರ ಪ್ರದೇಶ' ಕಿರೀಟ ಮುಡಿಗೇರಿಸಿಕೊಂಡ ಇವರು, 2018ರ 'ಮಿಸ್ ಕಾಸ್ಮೋಸ್ ವರ್ಲ್ಡ್' ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್ 16'ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ 3ನೇ ರನ್ನರ್-ಅಪ್ ಸ್ಥಾನ ಪಡೆಯುವ ಮೂಲಕ ದೇಶಾದ್ಯಂತ ಭಾರಿ ಜನಪ್ರಿಯತೆ ಗಳಿಸಿದರು.
'ಫಿಯರ್ ಫ್ಯಾಕ್ಟರ್: ಖತ್ರೋನ್ ಕೆ ಕಿಲಾಡಿ 13' ಮತ್ತು 'ಸೆಲೆಬ್ರಿಟಿ ಮಾಸ್ಟರ್‌ಚೆಫ್ ಇಂಡಿಯಾ ಸೀಸನ್ 1' ಎರಡರಲ್ಲೂ ಟಾಪ್ 6 ಹಂತ ತಲುಪಿದ್ದ ಇವರು, 2025ರ 'ರಿಯಾಲಿಟಿ ರಾಣೀಸ್ ಆಫ್ ದಿ ಜಂಗಲ್ ಸೀಸನ್ 2'ರಲ್ಲಿ 1ನೇ ರನ್ನರ್-ಅಪ್ ಆಗಿ ಹೊರಹೊಮ್ಮಿದ್ದರು. ಇತ್ತೀಚೆಗೆ 2026ರಲ್ಲಿ ಬಿಡುಗಡೆಯಾದ 'ದಿ 50' (The 50) ರಿಯಾಲಿಟಿ ಶೋನಲ್ಲೂ ಸ್ಪರ್ಧಿಯಾಗಿ ಕಣಕ್ಕಿಳಿದು ಟಾಪ್ 12 ಹಂತದವರೆಗೆ ತಲುಪುವಲ್ಲಿ ಯಶಸ್ವಿಯಾದರು, (ಏಜೆನ್ಸೀಸ್​).