ಸಿನಿವಾಣಿ

ಫೋರ್ಬ್ಸ್ ಪಟ್ಟಿಯಲ್ಲಿ ಯಶ್ ರಾಕಿಂಗ್!; ದಕ್ಷಿಣದಲ್ಲಿ ಯಶ್ ನಂಬರ್ ಒನ್

ಬೆಂಗಳೂರು: ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸದಾ ಬಾಲಿವುಡ್​ನವರ ಹೆಸರೇ ಕಾಣಿಸುತ್ತಿತ್ತು. ಇದೀಗ ಮೊದಲ ಬಾರಿ ದಕ್ಷಿಣದ ಸ್ಟಾರ್​ಗಳನ್ನೂ ನೋಡಬಹುದು. ಆ ಪಟ್ಟಿಯಲ್ಲಿ ಚಂದನವನದ ಯಶ್ ಸ್ಥಾನ ಪಡೆದಿರುವುದಲ್ಲದೆ, ಮುಖಪುಟದಲ್ಲೂ ಮಿಂಚಿದ್ದಾರೆ ಎಂಬುದು ವಿಶೇಷ. ಬಾಲಿವುಡ್​ನಷ್ಟೇ ದಕ್ಷಿಣದ ಸಿನಿಮಾ ಕ್ಷೇತ್ರವೂ ಯಾವುದರಲ್ಲಿಯೂ ಕಡಿಮೆ ಇಲ್ಲ. ದೊಡ್ಡ ಬಜೆಟ್​ನ ಸಿನಿಮಾ ನಿರ್ಮಾಣದಿಂದ ಹಿಡಿದು, ಬಾಕ್ಸ್ ಆಫೀಸ್​ನಲ್ಲಿಯೂ ಅಷ್ಟೇ ದೊಡ್ಡ ಮಟ್ಟದ ಗಳಿಕೆ ಮಾಡುತ್ತಿವೆ. ಒಟಿಟಿ ವೇದಿಕೆಯಲ್ಲಿಯೂ ದಕ್ಷಿಣದ ಕೊಡುಗೆ ಗಣನೀಯ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡೇ ಮೊದಲ ಸಲ ಫೋರ್ಬ್ಸ್, ದಕ್ಷಿಣದ ಸೆಲೆಬ್ರಿಟಿ ವಿಶೇಷ ಎಂಬ ಮ್ಯಾಗ್​ಜೀನ್ ಬಿಡುಗಡೆ ಮಾಡಿದೆ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡ, ಹಿಂದಿಯೇತರ ತಾರೆಗಳನ್ನು ಈ ಮ್ಯಾಗಜೀನ್​ನಲ್ಲಿ ಕಾಣಬಹುದಾಗಿದೆ. ಯಶ್ ಮುಖಪುಟದಲ್ಲಿ ಸ್ಥಾನ ಪಡೆದರೆ, ನಯನತಾರಾ, ದುಲ್ಖರ್ ಸಲ್ಮಾನ್ ಸಹ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಇನ್ನು ಕನ್ನಡದ ಮಟ್ಟಿಗೆ ಯಶ್ ಹೊರತುಪಡಿಸಿದರೆ ಈ ವರೆಗೆ ಯಾವ ನಟ, ನಟಿಯರಿಗೂ ಈ ಅವಕಾಶ ಸಿಕ್ಕಿಲ್ಲ.