ಬೆಂಗಳೂರು: ಎರಡು ವರ್ಷಗಳ ಹಿಂದೆ ತೆರೆ ಕಂಡಿದ್ದ ‘ರಾಜ್ ವಿಷ್ಣು’ ಚಿತ್ರ ನಿರ್ದೇಶಿಸಿದ್ದ ಕೆ. ಮಾದೇಶ್, ಆ ನಂತರ ಇನ್ಯಾವ ಚಿತ್ರಕ್ಕೂ ಆಕ್ಷನ್-ಕಟ್ ಹೇಳಿರಲಿಲ್ಲ. ಎರಡು ವರ್ಷಗಳಿಂದ ಬರೀ ರಿಮೇಕ್ ಕಥೆಗಳೇ ಬರುತ್ತಿದ್ದರಿಂದ ಸ್ವಲ್ಪ ಗ್ಯಾಪ್ ಆಯಿತು ಎನ್ನುವ ಮಾದೇಶ್, ಇದೀಗ ಸ್ವಮೇಕ್ ಚಿತ್ರವೊಂದರ ಮೂಲಕ ವಾಪಸಾಗುತ್ತಿದ್ದಾರೆ.
ಈ ಚಿತ್ರದಲ್ಲಿ ‘ರಿಯಲ್ ಸ್ಟಾರ್’ ಉಪೇಂದ್ರ ಹಾಗೂ ಹರಿಪ್ರಿಯಾ ನಾಯಕ-ನಾಯಕಿಯಾಗಿ ನಟಿಸಲಿದ್ದು, ಇದೇ ಮೊದಲ ಬಾರಿಗೆ ಅವರಿಬ್ಬರೂ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವುದು ಈ ಸಿನಿಮಾದ ಮತ್ತೊಂದು ವಿಶೇಷ.
ಇನ್ನೂ ಶೀರ್ಷಿಕೆ ನಿಗದಿಗೊಳಿಸದ ಈ ಸಿನಿಮಾ ಕುರಿತ ಹೆಚ್ಚಿನ ಮಾಹಿತಿಗಳನ್ನು ಸದ್ಯಕ್ಕೆ ಗುಟ್ಟಾಗಿರಿಸಿರುವ ನಿರ್ದೇಶಕರು, ಮುಂದಿನ ವಾರದಲ್ಲಿ ಎಲ್ಲವನ್ನೂ ಅಧಿಕೃತವಾಗಿ ಪ್ರಕಟಿಸಲಾಗುವುದು ಎನ್ನುತ್ತಾರೆ.
‘ಇದು ಟಿಪಿಕಲ್ ಉಪೇಂದ್ರ ಸ್ಟೈಲ್ ಸಿನಿಮಾ. ಸದ್ಯಕ್ಕೆ ಉಪೇಂದ್ರ ಹಾಗೂ ಹರಿಪ್ರಿಯಾ ಫಿಕ್ಸ್ ಆಗಿದ್ದಾರೆ. ಉಳಿದ ತಾರಾಗಣದ ಆಯ್ಕೆ ನಡೆಯುತ್ತಿದೆ. ವಿಲನ್ ಪಾತ್ರಕ್ಕೆ ಅನುಪಮ್ ಖೇರ್ ಅವರ ಸಹೋದರ ರಾಜು ಖೇರ್ ಅವರನ್ನು ಸಂರ್ಪಸಲಾಗುತ್ತಿದೆ. ಆ ಬಗ್ಗೆ ಇನ್ನೂ ಮಾತುಕತೆ ನಡೆಯುತ್ತಿದೆ. ಅವರು ಲಭ್ಯರಿಲ್ಲದಿದ್ದರೆ ಬೇರೊಬ್ಬರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗುವುದು’ ಎನ್ನುತ್ತಾರೆ ಮಾದೇಶ್.
‘ಗಿಣಿ ಪ್ರೊಡಕ್ಷನ್ಸ್’ ಬ್ಯಾನರ್ನಲ್ಲಿ ನಿರ್ವಪಕ ಮುನಿರಾಜು ಬಂಡವಾಳ ಹೂಡುತ್ತಿರುವ ಈ ಸಿನಿಮಾಗೆ ನಿರ್ದೇಶಕರೇ ಕಥೆ-ಚಿತ್ರಕಥೆ ಬರೆದಿದ್ದಾರೆ. ‘ಭ್ರಷ್ಟಾಚಾರದ ವಿಷಯವನ್ನೇ ಆಧಾರವಾಗಿಟ್ಟುಕೊಂಡು ಕಥೆ ಹೆಣೆಯಲಾಗಿದೆ. ಎಲ್ಲೆಡೆ ಸದ್ದು ಮಾಡುತ್ತಿರುವ ಲಂಚದ ಪ್ರಕರಣಗಳೇ ಕಥೆಗೆ ಪ್ರೇರಣೆ’ ಎಂದು ಸಿನಿಮಾದ ಕಥಾಹಂದರದ ಬಗ್ಗೆ ಸಣ್ಣ ಮಾಹಿತಿ ನೀಡಿದ್ದಾರೆ ಮಾದೇಶ್.
ಉಪೇಂದ್ರ ಅವರ ಜತೆಗೆ ನಟಿಸುತ್ತಿರುವುದಕ್ಕೆ ಥ್ರಿಲ್ ಆಗಿರುವ ಹರಿಪ್ರಿಯಾ, ‘ಅವರ ಜತೆಗೆ ನಟಿಸುವ ಅಪರೂಪದ ಅವಕಾಶ ಸಿಕ್ಕಿದ್ದಕ್ಕೆ ಖುಷಿಯಾಗುತ್ತಿದೆ. ಸದ್ಯ ಏನೂ ಹೇಳುವಂತಿಲ್ಲ. ಏಕೆಂದರೆ, ಚಿತ್ರ ಪ್ರಾರಂಭವಾಗುವುದಕ್ಕೆ ಸ್ವಲ್ಪ ಸಮಯವಿದೆ. ಅದಕ್ಕೂ ಮುನ್ನ ಇನ್ನೊಂದು ಚಿತ್ರ ಮುಗಿಸಿ ಜೂನ್ನಲ್ಲಿ ಈ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುತ್ತೇನೆ’ ಎನ್ನುತ್ತಾರೆ.
ಇದು ‘ಉಪ್ಪಿ ರುಪ್ಪಿ’ ಅಲ್ಲ
‘ಉಪ್ಪಿ ರುಪ್ಪಿ’ ಎಂಬ ಶೀರ್ಷಿಕೆಯಲ್ಲಿ ಎರಡು ವರ್ಷಗಳ ಹಿಂದೆಯೇ ಉಪೇಂದ್ರ ಅವರಿಗೆ ಆಕ್ಷನ್-ಕಟ್ ಹೇಳಲು ಕೆ.ಮಾದೇಶ್ ಮುಂದಾಗಿದ್ದರು. ಚಿತ್ರದ ಮುಹೂರ್ತವಾದರೂ ಕಾರಣಾಂತರಗಳಿಂದ ಆ ಚಿತ್ರ ಮುಂದುವರೆಯಲಿಲ್ಲ. ಈಗ ಉಪೇಂದ್ರ ಜತೆ ಮಾದೇಶ್ ಚಿತ್ರ ಮಾಡುತ್ತಿರುವುದರಿಂದ, ಅದೇ ಸಿನಿಮಾ ಮತ್ತೆ ಟೇಕಾಫ್ ಆಯ್ತಾ? ಎಂಬ ಪ್ರಶ್ನೆ ಸಹಜ. ಮಾದೇಶ್ ಹೇಳುವಂತೆ ಅದಕ್ಕೂ ಇದಕ್ಕೂ ಸಂಬಂಧವಿಲ್ಲವಂತೆ. ಎರಡೂ ಬೇರೆಯದೇ ಚಿತ್ರಗಳು ಎನ್ನುತ್ತಾರೆ ಮಾದೇಶ್.