ಸಿನಿವಾಣಿ

ವಿಶ್ರಾಂತಿಯಲ್ಲಿ ಸುದೀಪ್: ಕರೊನಾ ಅಲ್ಲ ವೈರಲ್ ಫೀವರ್ ಎಂದ ಜಾಕ್ ಮಂಜು

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡಿ ‘ವಿಕ್ರಾಂತ್ ರೋಣ’ ಚಿತ್ರದ ಪ್ರಚಾರ ಮಾಡಿದ್ದ ಸುದೀಪ್, ಇದೀಗ ಜ್ವರಕ್ಕೆ ತುತ್ತಾಗಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಸುದೀಪ್ ಮತ್ತೊಮ್ಮೆ ಕರೊನಾದಿಂದ ಬಳಲುತ್ತಿದ್ದಾರೆ, ಪ್ರಚಾರಕ್ಕೆ ಹೋಗಬೇಕಿದ್ದವರು ಹಾಸಿಗೆ ಹಿಡಿದಿದ್ದಾರೆ ಎಂಬ ಮಾತುಗಳು ಬುಧವಾರ ಕೇಳಿಬಂದಿತ್ತು.

ಈ ಕುರಿತು ಸ್ಪಷ್ಟನೆ ನೀಡಿರುವ ‘ವಿಕ್ರಾಂತ್ ರೋಣ’ದ ನಿರ್ವಪಕ ಜಾಕ್ ಮಂಜು, ‘ಸುದೀಪ್ ಅವರಿಗೆ ಕರೊನಾ ಎಂಬುದು ಸುಳ್ಳು. ದೆಹಲಿಯಿಂದ ವಾಪಸ್ಸು ಬಂದು ಕ್ರಿಕೆಟ್ ಆಡುವಾಗ ಮಳೆಯಲ್ಲಿ ನೆನೆದು ಅವರಿಗೆ ಜ್ವರ ಬಂದಿದೆ. ಹಾಗಾಗಿ, ವಿಶ್ರಾಂತಿ ಪಡೆಯುತ್ತಿದ್ದಾರೆ. ಜುಲೈ 22ರಿಂದ ಮೂರು ದಿನಗಳ ಕಾಲ ಮುಂಬೈನಲ್ಲಿ ಮತ್ತೆ ಪ್ರಚಾರ ಮಾಡಲಿದ್ದಾರೆ. 25ರಂದು ಹೈದರಾಬಾದ್, 26ರಂದು ಬೆಂಗಳೂರಿನಲ್ಲಿ ಪ್ರಚಾರ ನಡೆಸಿ, 27ರಂದು ದುಬೈನಲ್ಲಿ ನಡೆಯುಲಿರುವ ಪ್ರೀಮಿಯರ್​ನಲ್ಲಿ ಭಾಗವಹಿಸಲಿದ್ದಾರೆ’ ಎಂದು ಸ್ಪಷ್ಟನೆ ನೀಡಿದ್ದಾರೆ. ‘ವಿಕ್ರಾಂತ್ ರೋಣ’ ಚಿತ್ರವು ಜುಲೈ 28ಕ್ಕೆ ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ.