ಮುಂಬೈ: ಲಾಕ್‌ಡೌನ್ ವೇಳೆಗೆ ಇಡೀ ದೇಶ ಕರೊನಾ ಭಯದಲ್ಲಿ ಮುಳುತ್ತಿತ್ತು. ಇತ್ತ ಬಾಲಿವುಡ್ ನಟ ಸೋನು ಸೂದ್ ಮಾತ್ರ ರಸ್ತೆಗಿಳಿದು ಜನೋಪಕಾರಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಒಂದೆಡೆ ಸುಶಾಂತ್ ಸಾವಿನ ತನಿಖೆ, ಆರೋಪ, ಪ್ರತ್ಯಾರೋಪಗಳ ಸರಣಿ ಟ್ವಿಟ್‌ಗಳ ಮಧ್ಯೆ ರಿಯಲ್ ಹೀರೋ ರೂಪದಲ್ಲಿ ಬಂದವರು ನಟ ಸೋನು ಸೂದ್. ಇದೀಗ ಅವರ ಆ ಕಾರ್ಯವೇ ಅವರನ್ನು ತೆರೆಮೇಲೆ ಹೀರೋವನ್ನಾಗಿ ಮಾಡಿದೆ. ಕಿಸಾನ್ ಅನ್ನೋ ಹೊಸ ಸಿನಿಮಾವನ್ನು ಸೋನು ಸೂದ್ ಒಪ್ಪಿಕೊಂಡಿದ್ದು, ಅದರಲ್ಲಿ ನಾಯಕನಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಕಂಗನಾ ಚಿತ್ರಕ್ಕೆ ಜಪಾನ್ ಛಾಯಾಗ್ರಾಹಕ …
ಹೌದು, ಲಾಕ್‌ಡೌನ್ ವೇಳೆ ಬರೋಬ್ಬರಿ 7 ಲಕ್ಷಕ್ಕೂ ಅಧಿಕ ನಿರಾಶ್ರಿತರನ್ನು ಅವರವರ ಮನೆಗೆ ಕಳುಹಿಸಿ ಅವರ ಪಾಲಿನ ಬಂಧುವಾದರು. ಮುಂಬೈನಲ್ಲಿ ನಿತ್ಯ 45 ಸಾವಿರ ಜನರಿಗೆ ಆಹಾರದ ಕಿಟ್ ವಿತರಿಸಿಯೂ ಸುದ್ದಿಯಾದರು. ಪ್ರವಾಸಿ ರೋಜಗಾರ್ ಯೋಜನೆ ತೆರೆದು ಕೆಲಸ ಕಳೆದುಕೊಂಡವರಿಗೆ ಕೆಲಸ ನೀಡಿದರು. ವಿದ್ಯಾರ್ಥಿಗಳಿಗೆ, ವೃದ್ಧರಿಗೆ, ಅಂಗವಿಕಲರಿಗೆ ಎಲ್ಲ ವರ್ಗದ ಜನರನ್ನೂ ತಲುಪಿ ತಮ್ಮ ಕೈಲಾದ ಸೇವೆ ಮಾಡಿದರು. ಅದರ ಮೂಲಕ ವಿಶ್ವಸಂಸ್ಥೆಯಿಂದಲೂ ಗುರುತಿಸಿಕೊಂಡರು ಸೋನು.
ಈ ಮೊದಲು ಡ್ರೀಮ್ ಗರ್ಲ್ ಸಿನಿಮಾ ನಿರ್ದೇಶನ ಮಾಡಿದ್ದ ರಾಜ್ ಶ್ಯಾಂಡಿಲ್ಯ ಕಿಸಾನ್ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಈ ಚಿತ್ರವನ್ನು ಈ ನಿವಾಸ್ ನಿರ್ದೇಶನ ಮಾಡಲಿದ್ದಾರೆ. ಶೀರ್ಷಿಕೆಯೇ ಹೇಳುವಂತೆ ಇದೊಂದು ರೈತರಿಗೆ ಸಂಬಂಧಿಸಿದ ಕಥೆಯಾಗಿದ್ದು, ಇನ್ನೇನು ಸಿನಿಮಾದ ಅಪ್ಡೇಟ್ ಮಾಹಿತಿ ಹೊರಬೀಳಲಿದೆ.
ಈ ಸಿನಿಮಾ ಘೋಷಣೆ ಆಗುತ್ತಿದ್ದಂತೆ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಸೋನು ಸೂದ್ಗೆ ಶುಭಾಶಯ ತಿಳಿಸಿದ್ದಾರೆ. ಅದೇ ರೀತಿ ಸೋನು ಅಭಿಮಾನಿಗಳೂ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು, ನೆಚ್ಚಿನ ನಟ ನಾಯಕನಾಗುತ್ತಿದ್ದಾರೆ ಎಂದು ಸಂಭ್ರಮಿಸುತ್ತಿದ್ದಾರೆ. (ಏಜೆನ್ಸೀಸ್)