ಕಿರುತೆರೆ ನಟ ಸುಶೀಲ್ ಗೌಡ ನೇಣಿಗೆ ಶರಣಾದ ಬೆನ್ನಲ್ಲೇ, ಅವರ ಸಾವಿಗೆ ಕಾರಣವೇನು ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದ್ದೆ. ಸಿರೀಯಲ್ಗಳಲ್ಲಿ ನಟನೆ, ಸಾಲು ಸಾಲು ಸಿನಿಮಾಗಳಲ್ಲಿ ಅವಕಾಶ, ಜೀವನ ನಿರ್ವಹಣೆಗೆ ಜಿಮ್ ತರಬೇತುದಾರ ಕೆಲಸ ಇನ್ನೇನು ಬೇಕಿತ್ತು ಈ ನಟನಿಗೆ ಎಂದು ಸಾಕಷ್ಟು ಮಂದಿ ಅನಿಸಿದ್ದನ್ನು ಹೇಳುತ್ತಿದ್ದಾರೆ. ಆದರೆ, ಕಳೆದ ಮೂರು ತಿಂಗಳಿಂದ ಒಂದಷ್ಟು ನೋವು ಸುಶೀಲ್ ಅವರನ್ನು ಬಾಧಿಸಿತ್ತಂತೆ. ಜೀವನವೇ ಬೇಸರ ಎನ್ನುವಷ್ಟರ ಮಟ್ಟಿಗೆ ನೊಂದಿದ್ದರಂತೆ.
ಸುಶೀಲ್ ಸಿನಿಮಾ ಮತ್ತು ಕಿರುತೆರೆ ನಟನೆ ಜತೆಗೆ ಜಿಮ್ ಟ್ರೇನರ್ ಆಗಿ ಕೆಲಸ ಮಾಡುತ್ತಿದ್ದರು. ಹೀಗಿರುವಾಗಲೇ ಆರ್ಥಿಕವಾಗಿಯೂ ಸುಶೀಲ್ ಸಂಕಷ್ಟದಲ್ಲಿದ್ದರಂತೆ. ಆ ಒಂದು ಕಾರಣದಿಂದಲೇ ಅವರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುಶೀಲ್ ಆಪ್ತವಲಯ ಹೇಳಿಕೊಂಡಿದೆ.
ಯುವನಟ ಸುಶೀಲ್ ಇದೀಗ ತಾನೇ ಸಿನಿಮಾರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದರು. ಒಳ್ಳೊಳ್ಳೆ ಅವಕಾಶಗಳೂ ಅವರನ್ನು ಅರಸಿ ಬರುತ್ತಿದ್ದವು. ಅದರಂತೆ, ದುನಿಯಾ ವಿಜಯ್ ನಿರ್ದೇಶನದ ‘ಸಲಗ’ ಚಿತ್ರದಲ್ಲಿ ಕಟ್ಟುಮಸ್ತಾದ ಪೊಲೀಸ್ ಪಾತ್ರದ ಹುಡುಕಾಟದಲ್ಲಿದ್ದ ವಿಜಯ್ಗೆ, ಮೊದಲು ಕಾಣಿಸಿದ್ದು ಸುಶೀಲ್. ಕರೆದು ಅವರಿಂದ ಆ ಪಾತ್ರ ಮಾಡಿಸಿದ್ದರು. ಹೀಗಿರುವಾಗಲೇ ಕರೊನಾ ಲಾಕ್ಡೌನ್ ಶುರುವಾದ ಬಳಿಕ ಸಿನಿಮಾರಂಗ ಸ್ತಬ್ಧವಾಯಿತು. ಜಿಮ್ಗಳು ತೆರೆಯದಂತೆ ಕಟ್ಟಪ್ಪಣೆ ವಿಧಿಸಲಾಯಿತು. ಇದೆಲ್ಲವೂ ಸುಶೀಲ್ ಅವರನ್ನು ಮಾನಸಿಕವಾಗಿ ಮತ್ತಷ್ಟು ಕುಗ್ಗಿಸಿದವು.
ಇತ್ತೀಚಿನ ಕೆಲ ದಿನಗಳಿಂದ ಇಂಡುವಾಳು ಗ್ರಾಮದ ಸ್ನೇಹಿತನ ಮನೆಯಲ್ಲಿ ವಾಸವಿದ್ದ ಸುಶೀಲ್, ಕೊನೆಗೆ ಅದೇ ಗ್ರಾಮದ ಮನೆಯಲ್ಲಿ ನೇಣಿಗೆ ಶರಣಾಗಿ, ಎಲ್ಲರಿಗೂ ಶಾಕ್ ನೀಡಿದ್ದರು. ಮಾನಸಿಕ ಖಿನ್ನತೆಯೂ ಸುಶೀಲ್ ಆತ್ಮಹತ್ಯೆಗೆ ಕಾರಣ ಎಂಬ ಮಾತು ಅವರದೇ ಆಪ್ತವಲಯದಿಂದ ಕೇಳಿಬರುತ್ತಿವೆ.